ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾವುದೇ ಶಕ್ತಿಗಳು ಪ್ರಯತ್ನಿಸಿದರೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ. ಒಂದು ಕೋಟಿ ಜನರನ್ನು ಜೈಲಿಗೆ ನುಗ್ಗಿಸುತ್ತೇನೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಂತೆ. ಮುಖ್ಯಮಂತ್ರಿ ಹುದ್ದೆಗೆ ಧಕ್ಕೆ ತರುವ ಅಧಿಕಾರ ರಾಜ್ಯಪಾಲರಿಗೆ ಇರಬಾರದು. ಬಹುಮತದ ಸರ್ಕಾರವನ್ನು ಕಿತ್ತು ಹಾಕುವ ಅಧಿಕಾರ ರಾಜ್ಯಪಾಲರಿಗೆ ನೀಡಲೇಬಾರದು. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು.
ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾವುದೇ ಪಕ್ಷದಲ್ಲೂ, ಯಾವುದೇ ನಾಯಕ ಇಲ್ಲ. ಇದನ್ನು ನಾನು ಅವರ ಸ್ನೇಹಿತನಾಗಿ ಹೇಳುತ್ತಿಲ್ಲ. ನೈಜ ವಿಚಾರ ಹೇಳುತ್ತಿದ್ದೇನೆ. ಸರ್ಕಾರದ ಇನ್ನುಳಿದ ಅವಧಿಯಲ್ಲಿ ಅನೇಕ ಕೆಲಸಗಳು ಆಗಬೇಕಿದೆ. ಅದನ್ನು ಸಿದ್ದರಾಮಯ್ಯ ಅವರೇ ಮಾಡಬೇಕು ಎಂದರು.
ಸಿದ್ದರಾಮಯ್ಯ ಆದರ್ಶ ಮತ್ತು ಅದ್ಭುತವಾದ ವ್ಯಕ್ತಿಯಾಗಿದ್ದಾರೆ. ಅನೇಕ ಬಾರಿ ಬಂದ್ ಮಾಡಿದರೂ ವಿರೋಧ ಮಾಡಲಿಲ್ಲ. ಹಿಂದೆ ಒಮ್ಮೆ ಬಂದ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೇಳಿಕೊಂಡಾಗ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಂದ್ ಮುಂದಕ್ಕೆ ಹಾಕಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ಆದರೆ, ಸಿದ್ದರಾಮಯ್ಯ ಅವರು ನಾವು ನಿಗದಿಪಡಿಸಿದ ದಿನಾಂಕದಂದೇ ಬಂದ್ ನಡೆಯಲಿ ಎಂದು ಬೆಂಬಲಿಸಿದರು ಎಂದು ಕನ್ನಡ ಹೋರಾಟದ ನೆನಪುಗಳನ್ನು ನಾಗರಾಜ್ ಹಂಚಿಕೊಂಡರು.