ಸಾರಾಂಶ
ವಿಧಾನ ಪರಿಷತ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ವಿದ್ಯಾರ್ಥಿ ಘಟಕ, ಪಕ್ಷ ಸಂಘಟನೆ ಹಾಗೂ ಸಹಕಾರಿ ಕ್ಷೇತ್ರದ ಅನುಭವ ಹೊಂದಿದ್ದಾರೆ ಎಂದು ಗುಂಡೂರಾವ್ ಹೇಳಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಾಂಗ್ರೆಸ್ ಮಹಾವೈಭವ ಮತ್ತೆ ದಕ್ಷಿಣಕನ್ನಡದಲ್ಲಿ ಕಾಣಬೇಕೆಂದರೆ ಪ್ರತೀ ಹೆಜ್ಜೆಗಳೂ ದಿಟ್ಟವಾಗಿರಬೇಕು. ಕಾಂಗ್ರೆಸ್ ದಕ್ಷಿಣ ಕನ್ನಡವನ್ನು ಗೆದ್ದರೆ ಇಡೀ ರಾಜ್ಯ ಗೆದ್ದಂತೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ವಿದ್ಯಾರ್ಥಿ ಘಟಕ, ಪಕ್ಷ ಸಂಘಟನೆ ಹಾಗೂ ಸಹಕಾರಿ ಕ್ಷೇತ್ರದ ಅನುಭವ ಹೊಂದಿದ್ದಾರೆ ಎಂದು ಗುಂಡೂರಾವ್ ಹೇಳಿದರು.ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪಕ್ಷದ ಋಣ ತೀರಿಸಲು ಇದೊಂದು ಒಳ್ಳೆಯ ಅವಕಾಶವಾಗಿದ್ದು, ಜೊತೆಗೆ ಇತರ ಪಕ್ಷದವರ ಮನವೊಲಿಸುವ ಕೆಲಸವನ್ನು ಕಾಂಗ್ರೇಸ್ ಬೆಂಬಲಿತ ಜನಪ್ರತಿನಿಧಿಗಳು ಮಾಡಬೇಕು ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪರಿಷತ್ ಉಪಚುನಾವಣೆ ಗೆಲವು ಮುಂದಿನ ತಾ.ಪಂ., ಜಿ.ಪಂ. ಚುನಾವಣೆಗೂ ನೆರವಾಗುತ್ತದೆ ಎಂದರು.ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿದರು. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ , ಪ್ರಮುಖರಾದ ಜಿ.ಎ.ಬಾವ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವಿನ್ ಕುಮಾರ್ ರೈ, ವಾಸು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಅಬ್ಬಾಸ್ ಅಲಿ ಮತ್ತಿತರರಿದ್ದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ನಿರ್ವಹಿಸಿದರು.