ಸಾರಾಂಶ
ಉತ್ತಮ ಸಂಸ್ಕಾರ, ಚಾರಿತ್ರ್ಯಗಳೊಂದಿಗೆ ಬೆಳೆದು ಆರೋಗ್ಯವಂತ ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಯೋಗದಾನ ನೀಡಬೇಕು.
ಹಳಿಯಾಳ: ಯಶಸ್ಸಿನ ಹಾದಿಯು ಸುಲಭವಲ್ಲ. ಅದೊಂದು ಕಠಿಣ ಮಾರ್ಗ, ತಪಸ್ಸು. ನಿರಂತರ ಅಭ್ಯಾಸ. ಸಾಧಿಸಿಯೇ ಸಾಧಿಸುವೆ ಎಂಬ ಛಲ, ಹುಮ್ಮಸ್ಸು ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಧಾರವಾಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ವಿನಾಯಕ ಭಟ್ ತಿಳಿಸಿದರು.
ಶನಿವಾರ ಪಟ್ಟಣದ ಕೆಎಲ್ಎಸ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ 2024- 25ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶವು ಪ್ರಗತಿಯ ಪಥದಲ್ಲಿದೆ. ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು. ಉತ್ತಮ ಸಂಸ್ಕಾರ, ಚಾರಿತ್ರ್ಯಗಳೊಂದಿಗೆ ಬೆಳೆದು ಆರೋಗ್ಯವಂತ ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಯೋಗದಾನ ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ವಿದ್ಯಾರ್ಥಿ ಜೀವನ ಪ್ರಮುಖ ಹಂತವಾಗಿದ್ದು, ಎಲ್ಲರ ಪ್ರೇರಣೆ ಪಡೆದು ಈ ಮಹತ್ವದ ಕಾಲವನ್ನು ಉಜ್ವಲ ಭವಿಷ್ಯವನ್ನು ರೂಪಿಸಲು ಬಳಸಿಕೊಳ್ಳಿ ಎಂದರು.
ಶೈಕ್ಷಣಿಕ ಸಂಯೋಜಕ ಉದಯ ರೇವಣಕರ, ಉಪನ್ಯಾಸಕ ಸುಜಾತಾ ಹುಂಡಿ, ಷಣ್ಮುಖ ದಂಡಿನ, ನಿಫಾ ಮಸ್ಕರೇನಸ್, ಪ್ರೀತಿ ತೇಲಿ, ಎಂ.ವಿ. ಕಿರಣಕುಮಾರ, ಸಪ್ಮಾ ಸಾಳುಂಕೆ, ವರುಣ ಪಾಟೀಲ, ರಾಜೇಶ ಹೆಗಡೆ, ಮಂಜುನಾಥ ಭೋವಿ ಇದ್ದರು. ಅನನ್ಯಾ ಕುಬಸದ, ಅಫಿಪಾ ಮುಲ್ಲಾ ಹಾಗೂ ಸಂಪದಾ ಬೊಬಾಟೆ ನಿರೂಪಿಸಿದರು.