ಸಾರಾಂಶ
ರಸ್ತೆಗಳನ್ನು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದರೆ ಜನರ ಏನು ಮಾಡಬೇಕು ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದಿತ ಸ್ಥಳವನ್ನು ಸರ್ವೇ ನಡೆಸಿ ಮೂರು ವಾರದಲ್ಲಿ ವಸ್ತುನಿಷ್ಠ ವರದಿ ಸಲ್ಲಿಸುವಂತೆ ಬೆಂಗಳೂರು ಜಿಲ್ಲಾಧಿಕಾರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.ಈ ಕುರಿತಂತೆ ಸುಂಕದಕಟ್ಟೆ ನಿವಾಸಿ ಸಿ.ಹೊನ್ನಯ್ಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಜತೆಗೆ, ಪ್ರತಿವಾದಿಯಾಗಿರುವ ಸರ್ಕಾರ, ಬಿಬಿಎಂಪಿ ಹಾಗೂ ಸೊಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕ ಅವರ (ಡಿಡಿಎಲ್ಆರ್) ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಬೇಕು. ಆ ಕುರಿತ ವರದಿಯನ್ನು ಮೂರು ವಾರದಲ್ಲಿ ಸಲ್ಲಿಸಬೇಕು. ನೋಟಿಸ್ ಪಡೆದವರು ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಡಿಡಿಎಲ್ಆರ್ ಅವರಿಗೆ ನೀಡಬೇಕು. ಡಿಡಿಎಲ್ಆರ್ ಅವರು ಸಂಬಂಧಿತ ಎಲ್ಲಾ ಸಾರ್ವಜನಿಕ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಬಹು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರಿ ರಸ್ತೆ ಒತ್ತುವರಿ ಮಾಡಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ರಸ್ತೆ ನಿರ್ಬಂಧಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆಯೇ? ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸಿದರೆ ಜನರು ಏನು ಮಾಡಬೇಕು? ಇದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಎಚ್ಚರಿಸಿತು. ಅಲ್ಲದೆ, ನ್ಯಾಯಾಲಯದ ಹಿಂದಿನ ನಿರ್ದೇಶನದ ಮೇರೆಗೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದ್ದರೂ, ಅದರಲ್ಲಿ ದೇವಸ್ಥಾನ ನಿರ್ಮಿಸಲು ರಸ್ತೆ ಒತ್ತುವರಿ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಮತ್ತೊಂದೆಡೆ ಟ್ರಸ್ಟ್ ಸದಸ್ಯರು ಹೇಳುವಂತೆ ಹಲವು ವರ್ಷಗಳಿಂದ ಅಲ್ಲಿ ದೇವಸ್ಥಾನ ಇತ್ತೇ ಎಂಬುದನ್ನು ತಿಳಿಸಲು ಬಿಬಿಎಂಪಿ ವಿಫಲವಾಗಿದೆ. ಆದ್ದರಿಂದ ಸ್ವತಂತ್ರ ಪ್ರಾಧಿಕಾರರಿಂದ ಸ್ಥಳ ಪರಿಶೀಲನೆ ನಡೆಸಿ ಸ್ಪಷ್ಟವಾದ ವರದಿ ಪಡೆಯುವುದು ಸೂಕ್ತವಾಗಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.