ಕೂಡ್ಲಿಗಿ: ಸರ್ಕಾರಗಳ ದುರಾಡಳಿತ ನೀತಿಯಿಂದ ಕಾರ್ಮಿಕರನ್ನು ಹಾಗೂ ರೈತರನ್ನು ಬೀದಿಗೆ ತರುವುದು ಸರಿಯಲ್ಲ. ಇದೇ ರೀತಿ ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತು ಕಾರ್ಮಿಕ ವಿರೋಧಿ ನೀತಿ ಹಿಂಪಡೆದುಕೊಳ್ಳದಿದ್ದರೆ ಕಾರ್ಮಿಕರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಸಿಐಟಿಯು ಸಂಘಟನೆಯ ಜಿಲ್ಲಾ ಮುಖಂಡ ಗುನ್ನಳ್ಳಿ ರಾಘವೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಪಟ್ಟಣದಲ್ಲಿ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರು, ಗ್ರಾಪಂ ನೌಕರರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆ ಸಹಯೋಗದಲ್ಲಿ ದೇಶವ್ಯಾಪಿ ಕಾರ್ಮಿಕರ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಡೀ ದೇಶದಲ್ಲಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿದೆ. ಸುಮಾರು 30 ಕೋಟಿ ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಾರ್ಮಿಕರೆಂದರೆ ಅಸಡ್ಡೆ ಮಾಡದೇ ಅವರಿಗೆ ಸಿಗುವ ಸವಲತ್ತುಗಳನ್ನು ನೀಡಬೇಕು. ಅಧಿಕಾರಕ್ಕೆ ಬರುವ ಮೊದಲು ಕಾರ್ಮಿಕರು ದುಡಿಯುವ ಶಕ್ತಿ ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತೀರಿ. ಆದರೆ ಅಧಿಕಾರ ಸಿಕ್ಕ ತಕ್ಷಣ ಅವರನ್ನೇ ಮರೆತು ಬಂಡವಾಳಶಾಹಿಗಳ ಪರವಾಗಿರುವ ಕಾನೂನು ಕಾಯ್ದೆ ತಿದ್ದುಪಡಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಿಐಟಿಯು ಸಂಘಟನೆಯ ಕಾನೂನು ಸಲಹೆಗಾರ ಸಿ.ವಿರೂಪಾಕ್ಷಪ್ಪ ಮಾತನಾಡಿ, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಲು, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಬೇಡ. ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು. ಕನಿಷ್ಠ ವೇತನ 37 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಬೆಲೆ ಏರಿಕೆ, 4 ಕಾರ್ಮಿಕ ಸಂಹಿತೆಗಳು ವಾಪಸ್ ಪಡೆಯಬೇಕು. ವಿದ್ಯುತ್ ಮೀಸಲಾತಿ ನುಂಗಿ ಹಾಕುವ ಖಾಸಗೀಕರಣ ನೀತಿ ಖಂಡಿಸಿ ದೇಶದಲ್ಲಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿದೆ. ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ಒಮ್ಮೆ ಅವಕಾಶ ಕೊಡಿ ನಿಮ್ಮಗಳ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದ ಮೋದಿ ಸರ್ಕಾರ, 15 ಪೈಸೆ ಸಹ ಕಾರ್ಮಿಕರ ಖಾತೆಗೆ ಹಾಕಿಲ್ಲ, ಅಂಬಾನಿ, ಅದಾನಿ ಅವರ ಖಾತೆ ಭರ್ತಿ ಆಗ್ತಿದೆ. ಇದೇನಾ ನಿಮ್ಮ ಅಚ್ಛೇದಿನ್? ಎಂದು ಪ್ರಶ್ನಿಸಿದರು.ಪಟ್ಟಣದ ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಆರಂಭವಾದ ಮುಷ್ಕರ 300ಕ್ಕೂ ಹೆಚ್ಚು ಸಂಘಟಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿ ತಹಸೀಲ್ದಾರ್ ವಿ.ಕೆ. ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಸಂಘಟನೆಯ ಮಹಾಂತಮ್ಮ, ವೆಂಕಮ್ಮ, ಗ್ರಾಮಪಂಚಾಯಿತಿ ನೌಕರರ ಸಂಘಟನೆಯ ಯರ್ರಿಸ್ವಾಮಿ ಸೇರಿದಂತೆ ನೂರಾರು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.