ಕೇಂದ್ರ ಸರ್ಕಾರ ವಿಬಿ ಜಿ ರಾಮ್‌ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷೆ ಸಪ್ನಾ ದೀಪ ಎಚ್ಚರಿಸಿದರು.

ಬೀದರ್‌: ಕೇಂದ್ರ ಸರ್ಕಾರ ವಿಬಿ ಜಿ ರಾಮ್‌ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷೆ ಸಪ್ನಾ ದೀಪ ಎಚ್ಚರಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಸಿತ ಭಾರತ - ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್‌ (ಗ್ರಾಮೀಣ) (VB G RAM G) 2025 ಮಸೂದೆಯನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್‌) ಉಗ್ರವಾಗಿ ಖಂಡಿಸುತ್ತದೆ. ಕಾರ್ಮಿಕರು ಮತ್ತು ಯಾವುದೇ ಕಾರ್ಮಿಕರ ಗುಂಪುಗಳ ಜೊತೆ ಸಮಾಲೋಚನೆ ನಡೆಸದೆ ಈ ಮಸೂದೆಯನ್ನು ರಚಿಸಿದೆ. ಈ ಮಸೂದೆ MGNREGA 2025ನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರದ ಬಿಗಿ ಮುಷ್ಟಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ. ಬಜೆಟ್‌ನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಗುಡುಗಿದರು.

ಈ ಮಸೂದೆಯ ಪ್ರಕಾರ ಪ್ರತಿ ವರ್ಷ ರಾಜ್ಯವಾರು ‘ಬಜೆಟ್ ಹಂಚಿಕೆ’ ಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು. ಪ್ರತಿ ರಾಜ್ಯ ದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುತ್ತದೆ. ಈಗಿರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯ ವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ ಸರ್ಕಾರವೇ ಮಿತಿಗೊಳಿಸುತ್ತ ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನ್ನಷ್ಟು ಹಣದ ಹೊರೆ ಹಾಕುವ ಮೂಲಕ ಬಿಜೆಪಿ ಸರ್ಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಜಿ ನರೇಗಾದಲ್ಲಿ ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಬಜೆಟ್‌ ಹಂಚಿಕೆ ಶೇ.90:10ರಷ್ಟಿತ್ತು ಆದರೆ ಈ ಮಸೂದೆಯಲ್ಲಿ ಇದು ಏರುಪೇರಾಗಿದೆ. ಕೃಷಿ ಚಟುವಟಿಕೆ ಸಮಯಯದಲ್ಲಿ 60 ದಿನಗಳ ಯೋಜನೆ ಸ್ಥಗಿತಗೊಳಿಸಲಾಗುವುದು ಹಾಗೂ ವರ್ಷದಲ್ಲಿ ಎರಡು ತಿಂಗಳು ಕೆಲಸ ನಿರಾಕರಿಸುವುದರಿಂದ ಮಹಿಳೆಯರು, ಭೂಹೀನರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಉದ್ಯೋಗದ ಹಕ್ಕಿನಿಂದ ನಿರಾಕರಿಸಿದಂತಾಗುತ್ತದೆ ಎಂದವರು ಹೇಳಿದರು.

ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತ್‌ಗಳನ್ನು ದುರ್ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ಈ ಮಸೂದೆಯನ್ನು ಧಿಕ್ಕರಿಸಿ ಈ ವರ್ಷಾಂತ್ಯದಲ್ಲಿ ಮಸೂದೆ ಕೈಬಿಡದಿದ್ದರೆ ಬೀದಿ ಬೀದಿಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವದಾಗಿ ಸಪ್ನಾ ಎಚ್ಚರಿಸಿದರು.

ಗ್ರಾಕೂಸ್‌ ಸಂಘಟನೆಯ ಪದಾಧಿಕಾರಿಗಳಾದ ಭೀಮ, ರೇಖಾ, ಗೀತಾ, ಸುರೇಖಾ, ರಾಜಕುಮಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.