ಆರೋಪ ಸಾಬೀತಾದರೆ ರಾಜಕೀಯ ಕ್ಷೇತ್ರ ತೆರವು: ಸಹಕಾರ ಸಚಿವ ರಾಜಣ್ಣ

| Published : Feb 12 2024, 01:38 AM IST / Updated: Feb 12 2024, 04:12 PM IST

ಸಾರಾಂಶ

ಮಾಜಿ ಸಚಿವ ಬಿ.ಶಿವರಾಂ ಲಂಚ ಪಡೆದ ಆರೋಪ ಇದ್ದರೆ ಯಾವುದಾದರೂ ದೇವಾಲಯಕ್ಕೆ ಬಂದು ಪ್ರಮಾಣ ಮಾಡಿ ಸಾಬೀತು ಮಾಡಲಿ. ನಾನು ರಾಜಕೀಯ ಕ್ಷೇತ್ರವನ್ನೇ ಬಿಡುತ್ತೇನೆ ಎಂದು ಉಸ್ತುವಾರಿ ಸಚಿವ ರಾಜಣ್ಣ ಮಾಜಿ ಸಚಿವ ಬಿ.ಶಿವರಾಂಗೆ ಸವಾಲು ಹಾಕಿದರು. ಬೇಲೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

‘ಕಳೆದ ಬಿಜೆಪಿ ಸರ್ಕಾರವನ್ನು ಶೇ ೪೦ ಕಮಿಷನ್ ಸರ್ಕಾರ ಎನ್ನುತ್ತಿದ್ದ ಕಾಂಗ್ರೆಸ್‌ ಸರ್ಕಾರ ಅದನ್ನೂ ಮೀರಿಸುತ್ತಿದೆ ಎಂದು ಆರೋಪ ಮಾಡಿರುವ ಮಾಜಿ ಸಚಿವ ಬಿ.ಶಿವರಾಂ ಲಂಚ ಪಡೆದ ಆರೋಪ ಇದ್ದರೆ ಯಾವುದಾದರೂ ದೇವಾಲಯಕ್ಕೆ ಬಂದು ಪ್ರಮಾಣ ಮಾಡಿ ಸಾಬೀತು ಮಾಡಲಿ.

ನಾನು ರಾಜಕೀಯ ಕ್ಷೇತ್ರವನ್ನೇ ಬಿಡುತ್ತೇನೆ’ ಎಂದು ಉಸ್ತುವಾರಿ ಸಚಿವ ರಾಜಣ್ಣ ಮಾಜಿ ಸಚಿವ ಬಿ.ಶಿವರಾಂಗೆ ಸವಾಲು ಹಾಕಿದರು.

ಕಾರ್ಯಕ್ರಮದ ನಿಮಿತ್ತ ಭಾನುವಾರ ಬೇಲೂರಿನ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಮಾತನಾಡಬಹುದು. 

ನಾನು ನನ್ನ ಪ್ರಾಮಾಣಿಕತೆಯಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ. ಯಾರು ನನ್ನ ಮೇಲೆ ಆರೋಪ ಮಾಡುತ್ತಾರೋ ಮೊದಲು ಅವರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. 

ನಾನು ಕೆಪಿಸಿಸಿ ಅಧ್ಹಕ್ಷರ ತರಹ ವರ್ತಿಸುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಲ್ಲದಿದ್ದರೂ ಅದಕ್ಕಿಂತ ಹೆಚ್ಚು, ನಾನು ಯಾವ ನಾಯಕರನ್ನು ಓಲೈಸಿಕೊಂಡು ಅವರನ್ನು ಮೆಚ್ಚಿಸಲು ಬಂದಿಲ್ಲ. 

ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು ಅಷ್ಟೆ. ನಾನು ಯಾವ ಮುಖಂಡರನ್ನು ಮೆಚ್ಚಿಸುವ ಅಗತ್ಯವಿಲ್ಲ’ ಎಂದು ಟೀಕಿಸಿದರು.

ಜನರೇ ನನ್ನ ಹೈಕಮಾಂಡ್: ಉಸ್ತುವಾರಿ ಸಚಿವರು ಹೈಕಮಾಂಡ್‌ಗೆ ಬೆಲೆ ಕೊಡುತ್ತಿಲ್ಲ ಎಂದು ಮಾದ್ಯಮದ ಪ್ರಶ್ನೆಗೆ ಉತ್ತರಿಸಿ, ‘ನನಗೆ ನಾನೇ ಹೈಕಮಾಂಡ್. ನಮಗೆ ಯಾರೂ ಹೈಕಮಾಂಡ್ ಇಲ್ಲ. 

ನನ್ನ ಹೈಕಮಾಂಡ್ ನನ್ನ ಮತದಾರರು. ನನಗೆ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಸೇರಿ ಹೈಕಮಾಂಡ್‌ಗೆ ಏನು ಗೌರವ ಕೊಡಬೇಕು ಅದನ್ನು ಕೊಡುತ್ತೇನೆ. ನಾನು ಯಾರು ಬೇಕೋ ಅವರ ಮಾತನ್ನು ಕೇಳುತ್ತೇನೆ. 

ನಾನು ಅವರ ಮಾತನ್ನು ಎಂದಿಗೂ ಧಿಕ್ಕರಿಸುವುದಿಲ್ಲ. ನಾನು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಈಗಾಗಲೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದು, ಯಾರು ಲಂಚ ಕೇಳುತ್ತಿದ್ದಾರೆ ಎಂಬುದರ ಬಗ್ಗೆ ಮೊದಲು ದೂರು ಕೊಡಲಿ. 

ನನಗೂ ಸಹ ಅವರ ಮೇಲೆ ಗೌರವವಿದೆ. ಅವರೂ ಸತ್ಯ ಹೇಳುತ್ತಾರೆಂದು ನಂಬಿದ್ದೇನೆ. ಇಲ್ಲಿ ಯಾರೂ ಸನ್ಯಾಸಿಗಳಲ್ಲ. 

ಈಗಾಗಲೇ ಎಂಪಿ ಚುನಾವಣೆಗೆ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ಶಿವರಾಂ, ಶ್ರೇಯಸ್ ಪಟೇಲ್, ಗೋಪಾಲಸ್ವಾಮಿ, ಬಾಗೂರು ಮಂಜೇಗೌಡ ಚುನಾವಣೆಗೆ ನಿಲ್ಲಲು ಮುಂದಾಗಿದ್ದು ನಾವೆಲ್ಲಾ ಚರ್ಚಿಸಿ ಮತ್ತು ಮತದಾರರ ಒಮ್ಮತದ ನಿರ್ಧಾರ ಪಡೆದು ಘೋಷಣೆ ಮಾಡುತ್ತೇವೆ’ ಎಂದರು. 

ಬೇಲೂರಿನ ಪ್ರವಾಸಿ ಮಂದಿರದಲ್ಲಿ ಸಚಿವ ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.