ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮೊದಲು ಜಾತಿ ಕಾಲಂನಲ್ಲಿ ಏಳು ಧರ್ಮಗಳ ಕಾಲಂಗಳು ಮಾತ್ರ ಇದ್ದವು. 2011ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಅವುಗಳ ಜೊತೆಗೆ ಉದ್ದೇಶಪೂರ್ವಕವಾಗಿಯೇ ಇತರೆ ಎಂಬ ಹೊಸ ಕಾಲಂ ಸೇರಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶವಿಲ್ಲದಿದ್ದರೂ ಈಗ ರಾಜ್ಯದಲ್ಲಿ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಗಣತಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇನಾ ಅಥವಾ ಬೇರೆ ಬೇರೆಯಾ ಎಂಬ ವಿಚಾರದ ಕುರಿತು ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸೆ.19ರಂದು ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಲಾಗುತ್ತಿದೆ. ಆದರೆ, ಅದು ಕೇವಲ ಅಖಿಲ ಭಾರತ ವೀರಶೈವ ಮಹಾಸಭಾದ ಬ್ಯಾನರ್ ಅಷ್ಟೆ. ಅದರ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ. ಹಿಂದೂ ಧರ್ಮವನ್ನು ವಿಭಜನೆ ಮಾಡುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. 2018ರಲ್ಲಿ ಧರ್ಮ ಒಡೆಯಲು ಹೋಗಿ, ಅದರ ಫಲ ಏನಾಯಿತೆಂದು ಅನುಭವಿಸಿದ್ದಾರೆ. ಈಗಲೂ ಆರ್ಥಿಕ ಸಮೀಕ್ಷೆ ಎಂದು ಬೇರೆ ಬೇರೆ ಸಮಾಜಗಳನ್ನು ಹುಟ್ಟಿಸುವ ಹಾಗೂ ವಿಭಜನೆ ಮಾಡುವ ಕೆಲಸಕ್ಕೆ ಮುಂದಾಗಿದ್ದು, ಜಾತಿ ಒಡೆಯುವ ಪಾಪದ ಕೆಲಸ ಮಾಡಿದರೆ ಈಗಲೂ ಅದಕ್ಕೆ ತಕ್ಕ ಪ್ರಾಯಶ್ಚಿತ ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ. ಯಾಕಾದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ ಎಂದು ಜನರು ಬೇಸರಿಸಿಕೊಳ್ಳುತ್ತಿದ್ದಾರೆ. ಇವರ ದುರಾಡಳಿತದಿಂದ ಬೇಸತ್ತ ಜನರು ನಮಗೆ ಅವಕಾಶ ನೀಡಲಿದ್ದು, ಇನ್ನು ಈ ರೀತಿ ಸಮಸ್ಯೆಗಳು ಎಲ್ಲಾ ಪಕ್ಷಗಳಲ್ಲೂ ಇರುತ್ತವೆ. ಕಾಂಗ್ರೆಸ್‌ನಲ್ಲಿಯೂ ನಾನೇ ಸಿಎಂ ಆಗಿ ಮುಂದುವರೆಯಬೇಕು ಎಂದು ಸಿದ್ಧರಾಮಯ್ಯ ಕಸರತ್ತು ಮಾಡುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ,ಶಿವಕುಮಾರ ಸಿಎಂ ಆಗುತ್ತೇನೆಂದು ಹೇಳುತ್ತಾರೆ. ಮತ್ತೊಂದೆಡೆ ಜಿ.ಪರಮೇಶ್ವರ, ಖರ್ಗೆ ಅವರ ಮನಸಿನಲ್ಲಿಯೂ ತಾವು ಸಿಎಂ ಆಗಬೇಕೆಂಬ ಆಸೆ ಇದೆ ಎಂದರು.ರಾಜ್ಯದಲ್ಲಿ ಹಿಂದುತ್ವದ ಪಾರ್ಟಿ ಅಸ್ತಿತ್ವಕ್ಕೆ ಬರುವ ವಿಚಾರದ ಬಗ್ಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಒಡೆದು ಲಾಭ ಮಾಡಿಕೊಳ್ಳಬೇಕು ಎಂಬ ಉದ್ದೇಶ ಇರುತ್ತದೆ. ಹಾಗಾಗಿಯೇ ಜಾತಿಗಣತಿಯಲ್ಲಿ ಸಮಾಜಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿಎಂ ವಿರುದ್ಧ ಪೋಸ್ಟ್ ಹಾಕಿದವರ ಮೇಲೆ ಕೇಸ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಕುರಿತು ಒಂದು ಪೋಸ್ಟ್ ಹಾಕಿದರೆ ಕೇಸ್ ಮಾಡಿ. ಅವರ ಮೇಲೆ ದಬ್ಬಾಳಿಕೆ ಮಾಡ್ತಾರೆ. ಆದರೆ, ಪ್ರಧಾನಿ ಮೋದಿ ಅವರಿಗೆ ಹೀಯಾಳಿಸಿದರೆ, ಹಿಂದೂ ಧರ್ಮಕ್ಕೆ ಹೀಯಾಳಿಸಿದರೆ, ಅವಹೇಳನ ಮಾಡಿದರೆ ಅವರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಂಡಿಲ್ಲ. ಸದ್ಯಕ್ಕೆ ಅವರ ಬಳಿ ಅಧಿಕಾರವಿದೆ ಮಾಡುತ್ತಿದ್ದಾರೆ. ಅಧಿಕಾರ ಯಾವತ್ತು ಪರ್ಮನೆಂಟ್ ಅಲ್ಲ ಎಂದರು.
ಹಾಸನದಲ್ಲಿ ನಡೆದ ಅಪಘಾತದಲ್ಲಿ ವಾಹನ ಚಾಲಕ ಗಾಂಜಾ ಸೇವಿಸಿದ್ದರಿಂದ ಹೀಗಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮಕ್ಕೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಹಿಡಿತವಿಲ್ಲ. ಎಲ್ಲೆಂದರಲ್ಲಿ ಗಾಂಜಾ ಸೇರಿ ನಿಷೇಧಿತ ವಸ್ತುಗಳು ಸಿಗುತ್ತಿವೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ಕೋಶಾಧ್ಯಕ್ಷ ಭೀಮಾಶಂಕರ ಹದನೂರ, ಶಿವು ಹಿರೇಮಠ, ಮಲ್ಲಮ್ಮ ಜೊಗೂರ, ವಿಜಯ ಜೋಶಿ ಇದ್ದರು.
------------ಕೋಟ್
ಎರಡೂವರೆ ವರ್ಷದ ಬಳಿಕ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಅಷ್ಟರೊಳಗೆ ಪಕ್ಷ ಗಟ್ಟಿಯಾಗಲು ಪಕ್ಷದಲ್ಲಿ ಯಾರನ್ನೂ ತರಬೇಕು, ಯಾರನ್ನು ಮುನ್ನೆಲೆಗೆ ತಂದು ಕೂಡಿಸಬೇಕು ಎಂಬುದು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಚುನಾವಣೆಗೆ ಇನ್ನೂ ಸಮಯವಿದೆ, ಪ್ರತಿ ಆರು ತಿಂಗಳಿಗೊಮ್ಮೆ ರಾಜಕಾರಣದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಇನ್ನೂ 2.9 ವರ್ಷ ಸಮಯವಿದ್ದು, ಪಕ್ಷಕ್ಕೆ ಬೇಕಾಗಿರುವ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಈಗಿರುವ ನಾಯಕತ್ವ ಹೈಕಮಾಂಡ್ ನಿರ್ಧಾರವಾಗಿರುವುದರಿಂದ ಅವರ ಆದೇಶಕ್ಕೆ ನಾವೆಲ್ಲ ತಲೆಬಾಗಿ ಕೆಲಸ ಮಾಡುತ್ತಿದ್ದೇವೆ.- ಅರವಿಂದ ಬೆಲ್ಲದ, ವಿಧಾನಸಭೆ ವಿಪಕ್ಷದ ಉಪನಾಯಕ