ಸಾರಾಂಶ
ಕನ್ನಡಪ್ರಭವಾರ್ತೆ ಹೊಸದುರ್ಗ
ಮುಖ್ಯಾಧಿಕಾರಿಗೆ ಶಿಸ್ತಿಲ್ಲ ಎಂದರೆ ಸಿಬ್ಬಂದಿಗೆ ಶಿಸ್ತು ಬರಲು ಹೇಗೆ ಸಾಧ್ಯ, ಪುರಸಭೆ ಅಧಿಕಾರಿಯಿಂದ ಹಿಡಿದು ಸಿಬ್ಬಂದಿಗಳು ಬೇಕಾಬಿಟ್ಟಿ ಕೆಲಸ ಮಾಡಿತ್ತಿದ್ದೀರಾ. ನೀವೇನೂ ಪುಕ್ಕಟ್ಟೆ ಕೆಲಸ ಮಾಡುತ್ತೀದ್ದೀರಾ ಎಂದು ಆಡಳಿತ ಪಕ್ಷದ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದ ಘಟನೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.ಸಭೆ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರೆ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸ ಒಂದೂ ಆಗುತ್ತಿಲ್ಲ ನಮಗೆ ಮತ ಹಾಕಿದ ಜನ ಬಾಯಿಗೆ ಬದಂತೆ ಬಯ್ಯುತ್ತಿದ್ದಾರೆ. ಕಂದಾಯ ಇಲಾಕೆಯಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿದೆ ತನಿಖೆ ಆಗುವವರೆಗೂ ಯಾವುದೇ ಬಿಲ್ ನೀಡಬೇಡಿ ಎಂದು ತಿಳಿಸಿದರೂ ಬಿಲ್ ಪಾವತಿಸಲಾಗಿದೆ ಹಾಗಾದರೆ ಸದಸ್ಯರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲವಾ ಎಂದು ಸದಸ್ಯ ದಾಳಿಂಬೆ ಗಿರೀಶ್ ಪ್ರಶ್ನಿಸಿದರು.
ಮುಖ್ಯಾಧಿಕಾರಿ ವಾಹನಗಳ ದೈನಂದಿನ ನಿರ್ವಹಣೆಗಾಗಿ ಬಿಲ್ ಪಾವತಿ ಮಾಡಲಾಗಿದೆ, ಅವ್ಯವಹಾರ ನಡೆದಿಲ್ಲ ಎಂದು ಉತ್ತರಿಸಲು ಮುಂದಾಗುತ್ತಿದ್ದಂತೆ ಕೆಲ ದಾಖಲೆ ಹಾಗೂ ಪೋಟೋಗಳನ್ನು ಪ್ರದರ್ಶೀಸಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆ ನೀಡಬಲ್ಲೆ ನೀವು ಯಾವುದೇ ತನಿಖೆ ಮಾಡದೆ ಹಣ ಪಾವತಿ ಮಾಡಿದ್ದೀರಾ ಇದಕ್ಕೆ ಅಧ್ಯಕ್ಷರು ಅನುಮತಿ ನೀಡಿದ್ದಾರಾ? ಇದರಲ್ಲಿ ನಿಮ್ಮ ಪಾಲೇನು ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.ಇದಕ್ಕೆ ಅಧ್ಯಕ್ಷೆ ರಾಜೇಶ್ವರಿ ಪ್ರತಿಕ್ರಿಯಿಸಿ ನಾನು ಬಿಲ್ ಪಾವತಿ ಮಾಡಲು ಅನುಮೋದನೆ ನೀಡಿಲ್ಲ ನಾನು ಕೂಡ ಬಿಲ್ ನೀಡದಂತೆ ಮುಖ್ಯಾಧಿಕಾರಿಗೆ ಹೇಳಿದ್ದೇ ಆದರೂ ಬಿಲ್ ನಿಡಿದ್ದಾರೆ. ಈ ಬಗ್ಗೆ ತನಿಖೆಯಾಗಲೀ ಎಂದರು.
*ನಾನೇನೂ ಸತ್ತಿಲ್ಲ: ಕಸ ವಿಲೇವಾರಿಯಲ್ಲಿ ಲಕ್ಷಾಂತರ ಹಣ ಅವ್ಯವಹಾರವಾಗಿದೆ ಕಸ ವಿಲೇವಾರಿ ಘಟಕದಲ್ಲಿ ತ್ಯಾಜ್ಯವನ್ನು ಮರುಬಳಕೆಗೆ ಮಾರಾಟ ಮಾಡುವಾಗ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಬೇಕು ಇದಾವುದನ್ನು ಮಾಡದೇ ಆರೋಗ್ಯ ಇಲಾಖೆ ಅಧಿಕಾರಿ ತನಗಿಷ್ಠ ಬಂದಂತೆ ಮಾಡುತ್ತಿದ್ದಾರೆ. ಈ ಹಿಂದೆ 2 ತಿಂಗಳಿಗೆ 1ರಿಂದ 2 ಲಕ್ಷ ಆದಾಯ ಬರುತ್ತಿತ್ತು ಆದರೆ ಈಗ ಕೇವಲ 41 ಸಾವಿರ ಆದಾಯ ತೋರಿಸಲಾಗುತ್ತಿದೆ ಈ ಬಗ್ಗೆ ತನಿಖೆ ಮಾಡುವಂತೆ ಸದಸ್ಯ ಶ್ರೀನಿವಾಸ್ ಒತ್ತಾಯಿಸಿದರು.ಇದಕ್ಕೆ ಕುಪಿತರಾದ ಅಧ್ಯಕ್ಷೆ ರಾಜೇಶ್ವರಿ ಕಣ್ಣೆದುರೇ ಲಕ್ಷಾಂತರ ಹಣ ಅವ್ಯವಹಾರ ನಡೆದಿದೆ. ನಾನೇನೂ ಸತ್ತಿಲ್ಲ ಹರಾಜು ಹೇಗೆ ಮಾಡಿದ್ದೀಯಾ ಎಲ್ಲದಕ್ಕೂ ಸಹಿ ಹಾಕು ಎಂದರೆ ನಾನೇಕೆ ಹಾಕಲಿ ಸದಸ್ಯರ ಮುಂದೆ ನನ್ನನ್ನು ನಿಷ್ಠೂರ ಮಾಡಬೇಡಿ ಎಂದು ಆರೋಗ್ಯ ಶಾಖೆಯ ಅಧಿಕಾರಿ ಕಲ್ಪನಾ ವಿರುದ್ಧ ಹರಿಹಾಯ್ದರು.
ಸದಸ್ಯೆ ಸರೋಜಮ್ಮ ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಚರಂಡಿಗೆ ಹಾಕಲಾಗಿರುವ ಕಾಂಕ್ರೀಟ್ ಕಿತ್ತು ಕಂಬಿ ಎದ್ದಿವೆ ಪ್ರತಿ ದಿನ ಜನ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇವತ್ತು ನಾನೂ ಬಿದ್ದು ಬಂದಿದ್ದೇನೆ ಇದನ್ನು ಸರಿ ಪಡಿಸುವಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಹೇಳುತ್ತಿದ್ದೇನೆ ಆದರೂ ಇದುವರೆವಿಗೂ ಸರಿ ಮಾಡಿಲ್ಲ. ಇದನ್ನು ಸರಿಪಡಿಸಲು ಲಕ್ಷಾಂತರ ಹಣ ಬೇಕಿಲ್ಲ ಕೇವಲ 10-20 ಸಾವಿರ ಸಾಕು ಇಷ್ಠು ಹಣ ಪುರಸಭೆಯಲ್ಲಿ ಇಲ್ಲಾವಾ ಎಂದು ಪ್ರಶ್ನಿಸಿದರು.ಸಭೆಯಲ್ಲಿ ಇನ್ನೂ ಕೆಲವು ವಿಚಾರಗಳು ಚರ್ಚೆಯಿರುವಾಗಲೇ ಹಲವು ಸದಸ್ಯರು ಹೊರ ನಡೆದರು ಇದರಿಂದ ಉಳಿದ ವಿಷಯಗಳಿಗೆ ಮೂರ್ನಾಲ್ಕು ಜನ ಸದಸ್ಯರೇ ತೀರ್ಮಾನ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ಕೋರಂ ಇಲ್ಲದೆ ಯಾವುದೇ ತೀರ್ಮಾನ ಮಾಡಬಾರದು ಎಂದು ಗದ್ದಲ ಎಬ್ಬಿಸಿದ್ದರಿಂದ ಸಭೆಯನ್ನು ಮುಂದೂಡಲಾಯಿತು.