ಕನಕಪುರ: ನೀವೆಲ್ಲರೂ ಬೆಂಗಳೂರು ಜಿಲ್ಲೆ ಮಕ್ಕಳಾಗಿದ್ದು ಕನಕಪುರ, ರಾಮನಗರ ಮಟ್ಟದಲ್ಲಿ ಸ್ಪರ್ಧೆ ಮಾಡುವುದಷ್ಟೇ ಅಲ್ಲ, ನಿಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರಬೇಕು ಎಂಬುದು ನಿಮ್ಮ ಗಮನದಲ್ಲಿರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು
ಕನಕಪುರ: ನೀವೆಲ್ಲರೂ ಬೆಂಗಳೂರು ಜಿಲ್ಲೆ ಮಕ್ಕಳಾಗಿದ್ದು ಕನಕಪುರ, ರಾಮನಗರ ಮಟ್ಟದಲ್ಲಿ ಸ್ಪರ್ಧೆ ಮಾಡುವುದಷ್ಟೇ ಅಲ್ಲ, ನಿಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರಬೇಕು ಎಂಬುದು ನಿಮ್ಮ ಗಮನದಲ್ಲಿರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಕನಕೋತ್ಸವ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ಇಲ್ಲಿರುವ ಮಕ್ಕಳು ಹಾಗೂ ಪೋಷಕರು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ನಿಮ್ಮ ಮೂಲವನ್ನ ಮರೆಯಬಾರದು. ವಿದೇಶಿಗರು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದ್ದು, ನಾನು ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಮ್ಮ ಬೆಂಗಳೂರು ಹಾಗೂ ಇಲ್ಲಿನ ಯುವಕರ ಪ್ರತಿಭೆ ಬಗ್ಗೆ ಮಾತನಾಡಿದೆ. ನಮ್ಮ ಯುವಕರು ಪ್ರತಿಭಾವಂತರಿದ್ದು, ನೀವು ನಮ್ಮಲ್ಲಿ ಹೂಡಿಕೆ ಮಾಡ ಬನ್ನಿ ಎಂದೂ ಆಹ್ವಾನ ನೀಡಿರುವುದಾಗಿ ತಿಳಿಸಿದರು.ನಾನು ಓದುವಾಗ ನಮ್ಮ ಗುರುಗಳು ಒಂದು ಮಾತು ಹೇಳ್ತಿದ್ದರು ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯ, ಧರ್ಮ ಕಾರ್ಯಗಳಿಂದ ಸುಖ ಸಿಗುತ್ತದೆ ಎಂದು. ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ ಅಂದರೆ 2008ರಲ್ಲಿ. ನಾನು ಅಂತಿಮ ಪದವಿಯಲ್ಲಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಲಾಯಿತು. ನಾನು ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದ್ದಕ್ಕಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ಶಿಕ್ಷಣ ತಜ್ಞ, ರಾಜಕಾರಣಿ ಎಂದು ಹೇಳಿದರು.
ನಿಮ್ಮಂತ ಯುವಕರಿಗೆ ಪ್ರೋತ್ಸಾಹ ನೀಡಿ, ನೀವು ಭವಿಷ್ಯದಲ್ಲಿ ಡಿ.ಕೆ. ಶಿವಕುಮಾರ್, ಪ್ರದೀಪ್ ಈಶ್ವರ್, ಡಿ.ಕೆ.ಸುರೇಶ್, ರಮೇಶ್ ಅರವಿಂದರಂತೆ ಆಗಬೇಕು. ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ವಿದ್ಯೆ, ನೀವು ನಿಮ್ಮ ಬದುಕಿನಲ್ಲಿ ಕನಸು ಕಂಡು ಆ ಕನಸು ನನಸಾಗಿಸಲು ಇಚ್ಛೆ ಇರಬೇಕು. ಅದಕ್ಕೆ ಶಿಸ್ತುಬದ್ಧರಾಗಿರಬೇಕು. ಅದಕ್ಕಾಗಿ ನೀವು ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ನೀವು ಪುಸ್ತಕವನ್ನು ಓದಿದರೆ ಸಾಲದು, ನಿಮ್ಮ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಹೆಸರು ಉಳಿಸಿಕೊಂಡು ಹೋಗಬೇಕು. ನಿಮ್ಮ ಶಾಲೆಯ ಋಣ ತೀರಿಸಬೇಕು. ನಮ್ಮ ತಾಲೂಕಿನಲ್ಲಿ ಸಿಎಸ್ಆರ್ ನಿಧಿಯಲ್ಲಿ 15 ಅತ್ಯಾಧುನಿಕ ಶಾಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಪ್ರತಿ ಶಾಲೆಗೆ 15 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸಿಗುವ ಶಿಕ್ಷಣ, ನಿಮಗೆ ಇಲ್ಲೇ ಸಿಗುವಂತೆ ಮಾಡಲಾಗುತ್ತಿದೆ. ನಾನು ರಾಜಕಾರಣಿ, ಉದ್ಯಮಿ ಇರಬಹುದು. ಕನಕಪುರದ ಮಕ್ಕಳ ವಿದ್ಯಾಭ್ಯಾಸ ಭವಿಷ್ಯದ ಬಗ್ಗೆ ಕಾಳಜಿ ಇದೆ. ನೀವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರೆ, ನನ್ನ ಮಗಳು ಐಶ್ವರ್ಯ ಬೆಳೆದಷ್ಟೇ ನನಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು.
ನೀವು ಕೇವಲ ಪದವಿ ಪಡೆದು ಉದ್ಯೋಗಿಗಳಾಗುವುದಲ್ಲ. ನೂರಾರು ಜನರಿಗೆ ಉದ್ಯೋಗ ನೀಡುವಂತಹ ಉದ್ಯಮಿಗಳಾಗಬೇಕು. ನಿಮ್ಮ ಪೋಷಕರು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಬೆಳೆಸಿದ್ದಾರೆ. ಹೀಗಾಗಿ ನಾನು ನಿಮ್ಮ ಋಣ ತೀರಿಸಲು, ಡಿಕೆಎಸ್ ಟ್ರಸ್ಟ್ ಮೂಲಕ ನಿಮ್ಮ ಸೇವೆ ಮಾಡುತ್ತಿದ್ದೇವೆ. ಕನಕಪುರದ ಮಕ್ಕಳು ದೇಶದ ಆಸ್ತಿ ಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ, ಈ ಪ್ರತಿಭಾ ಪುರಸ್ಕಾರ, ಮುಂದೆ ನೀವು ಹತ್ತಾರು ಜನರನ್ನು ಗುರುತಿಸಿ ಪುರಸ್ಕಾರ ನೀಡವಂತ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಕೆ ಕೆ ಪಿ ಸುದ್ದಿ (1) :
ಕನಕೋತ್ಸವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಿದರು.