ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಕಾಂಗ್ರೆಸ್ ಕಚೇರಿಗಳಾಗಿ ಮತ್ತು ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲ ಕೋಮುವಾದಿ ಮುಸ್ಲಿಮರಿಗೆ ಹಬ್ಬವಿದ್ದಂತೆ. ಇದಕ್ಕೆ ಪೂರಕವಾಗಿ ಪೊಲೀಸ್ ಸ್ಟೇಷನ್‌ಗಳು ಆಡಳಿತ ಪಕ್ಷದ ಕಚೇರಿಗಳಂತೆ ಹಾಗೂ ಕಾಂಗ್ರೆಸ್ ನಾಯಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಟುವಾಗಿ ಟೀಕಿಸಿದರು. ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ. ನನ್ನ ಮೇಲೆ ಕೇಸ್ ಹಾಕಿದ್ದಾರೆ, ಶೋಭಾ ಕರಂದ್ಲಾಜೆ ಹಾಗೂ ಯತ್ನಾಳ್ ಅವರ ಮೇಲೆ ಕೇಸ್ ಹಾಕಿದ್ದಾರೆ. ತನಿಖೆ ಮಾಡಿ ಅಂತ ಹೇಳುವ ಹಕ್ಕು ವಿರೋಧ ಪಕ್ಷದ ನಾಯಕನಿಗೆ ಇಲ್ಲವೇ? ಸುಮೋಟೋ ಕೇಸ್ ದಾಖಲಿಸಿದ್ದಾರೆ. ಕಾನ್ಸ್‌ಟೇಬಲ್ ಕಂಪ್ಲೆಂಟ್ ಕೊಡುತ್ತಾನೆ ಇನ್ಸ್‌ಪೆಕ್ಟರ್ ಕೇಸ್ ಹಾಕುತ್ತಾನೆ. ಈಗ ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.ಖಜಾನೆ ದರೋಡೆ: ಈ ಸರ್ಕಾರ ಖಜಾನೆ ದರೋಡೆ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಕೊಡಲು ದುಡ್ಡಿಲ್ಲ, ಈ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದ್ದು, ಅದು ಯಾವಾಗ ಭುಗಿಲೇಳುತ್ತದೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಮರಿಗೆ ಹಬ್ಬ ಇದ್ದ ಹಾಗೆ. ಮಾಡಬಾರದ್ದನ್ನು ಮಾಡಿ ನಮ್ಮದು ಸರ್ಕಾರ ಇದೆ ಅಂತಾರೆ. ಯಾವುದೇ ರಸ್ತೆಯಲ್ಲೂ ನಿರ್ಭಯವಾಗಿ ಗಣೇಶನ ಮೆರವಣಿಗೆ ಮಾಡಲಾಗುತ್ತಿಲ್ಲ. ಇಡೀ ರಾಜ್ಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತೆ ಇರುತ್ತದೆ. ಗಣೇಶನನ್ನು ಎಲ್ಲಿ, ಎಷ್ಟು ದಿನ ಕೂರಿಸಬೇಕೆಂದು ಗಣಪತಿ ಸೇವಾಸಮಿತಿ ತೀರ್ಮಾನ ಮಾಡುತ್ತಿದ್ದರು. ಈಗ ಗಣೇಶನನ್ನು ಕೂರಿಸಲು ಪೊಲೀಸರು ತೀರ್ಮಾನ ಮಾಡುತ್ತಾರೆ. ಇದು ಕಾಂಗ್ರೆಸ್ ಸರಕಾರ ಆಗಿರುವುದರಿಂದ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಮೇಲೆ ಯಾವ ರೀತಿ ಬೇಕಾದರೂ ತನಿಖೆ ಮಾಡಿಸಲಿ. ಒಟ್ಟಾರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ. ಇದನ್ನ ಮರೆಮಾಚುವ ಕೆಲಸ ಮಾಡಬಾರದು ಎಂದು ಹೇಳಿದರು.
ದ್ವೇಷದ ರಾಜಕಾರಣ: ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಷನ್ ವಿಚಾರಕ್ಕೆ ಪ್ರತಿಕ್ರಯಿಸಿದ ಅಶೋಕ್, ಈ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ, ಅದು ಆಗಿ ಹದಿನೈದು ವರ್ಷ ಆಗಿದೆ. ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿ ಆಗಿದ್ದರು. ಈಗ ಆರೋಪ ಮಾಡುತ್ತಿರುವವರೆಲ್ಲಾ ಆಗ ಕುಮಾರಸ್ವಾಮಿ ಪಕ್ಕ ಕುಳಿತಿದ್ದರು, ಆಗ ಏಕೆ ಪ್ರಶ್ನೆ ಮಾಡಲಿಲ್ಲ, ಆಗ ಪ್ರೀತಿ ಇತ್ತು, ಈಗ ದ್ವೇಷ ಇದೆ ಹಾಗಾಗಿ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ತಿರುಗುಬಾಣ: ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲ, ಯಾವುದೇ ಕೆಲಸಗಳು ನಡೆಯುತ್ತಿಲ್ಲ, ಸಂಬಳ ಕೊಡಲು ದುಡ್ಡಿಲ್ಲ, ರೈತರ ಹಾಲಿನ ಸಬ್ಸಿಡಿ ಹಣ ನೀಡಿಲ್ಲ, ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳು ಬರುತ್ತಲೇ ಇವೆ, ಇದನ್ನು ಡೈವರ್ಟ್ ಮಾಡಲು ಬಿಜೆಪಿ ಮೇಲೆ ಕೇಸ್ ಹಾಕುತ್ತಿದ್ದಾರೆ. ಇದಕ್ಕೆ ನಾವೇನು ಹೆದರುವುದಿಲ್ಲ ಎಂದು ಹೇಳಿದರು. ಈ ಸರ್ಕಾರ ಗೂಟ ಹೊಡೆದುಕೊಂಡು ಇರುತ್ತದೆಯೇ ? ಬಹಳ ದಿನ ಈ ಸರ್ಕಾರ ಇರಲ್ಲ, ಅವರ ಪಕ್ಷದ ಶಾಸಕರೇ ಈ ಸರ್ಕಾರ ಇರಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ಬದಲಾದ ಮೇಲೆ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ನಿಮಗೂ ಇದು ತಿರುಗುಬಾಣ ಆಗಲಿದೆ. ಈ ತರ ದ್ವೇಷದ ರಾಜಕಾರಣ, ಹಳೇದು ಹುಡುಕುವುದು ಇದೆಲ್ಲಾ ನಿಮಗೆ ಒಳ್ಳೆಯದಾಗಲ್ಲ, ನಿಮ್ಮದು ಐವತ್ತು ವರ್ಷದ್ದು ಹುಡುಕಬೇಕಾಗುತ್ತದೆ. ರಾಜ್ಯದಲ್ಲಿ ಬಹಳ ದಿನ ಈ ಕಾಂಗ್ರೆಸ್ ಸರಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು. * ಬಾಕ್ಸ್‌ನ್ಯೂಸ್: ನಾವೇ ನಂಬರ್ ಒನ್ ಆಗಬೇಕು
ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸದಸ್ಯತ್ವ ಮಾಡಬೇಕೆಂದು ಪ್ರವಾಸ ಮಾಡುತ್ತಿದ್ದೇನೆ. ಪ್ರಪಂಚದಲ್ಲೇ ಹೆಚ್ಚು ಸದಸ್ಯತ್ವ ಇರುವ ಪಕ್ಷದಲ್ಲಿ ನಾವೇ ನಂಬರ್ ಒನ್ ಆಗಬೇಕು ಎನ್ನುವ ಗುರಿ ಹೊಂದಿದ್ದೇವೆ ಎಂದು ಆರ್ ಅಶೋಕ್ ತಿಳಿಸಿದರು.