ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಚುನಾವಣೆಗೆ ಕ್ಷೇತ್ರಗಳ ಸಮೀಕ್ಷೆ ಆದರಿಸಿ ಟಿಕೆಟ್ ಹಂಚುವ ಭರವಸೆ ನೀಡಿದ್ದ ಕಾಂಗ್ರೆಸ್ ನಾಯಕರು ನುಡಿದಂತೆ ನಡೆಯಬೇಕಲ್ಲದೇ, ಹಿಂದುಳಿದ ವರ್ಗದ ವಿದ್ಯಾವಂತ, ಜನಾನುರಾಗಿ ವ್ಯಕ್ತಿತ್ವದ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ್‌ಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡಬೇಕು. ಒಂದು ವೇಳೆ ಟಿಕೆಟ್ ತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿಮಾನಿ ಬಳಗದ ರಘು ದೊಡ್ಮನಿ ವರಿಷ್ಠರಿಗೆ ಎಚ್ಚರಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಸಕ್ರಿಯವಾಗಿರುವ ಜಿ.ಬಿ.ವಿನಯಕುಮಾರ ಹಲವಾರು ಜನಪರ ಕೆಲಸ ಮಾಡುತ್ತಾ ಬಂದಿರುವ ಯುವ ನಾಯಕ. ಹಿಂದುಳಿದ ವರ್ಗ, ಶೋಷಿತರು, ದೀನ ದಲಿತರು, ಅಲ್ಪ ಸಂಖ್ಯಾತರ ಪ್ರತಿನಿಧಿಯಾಗಿ ದಾವಣಗೆರೆ ಕ್ಷೇತ್ರದಲ್ಲಿ ವಿನಯಕುಮಾರ್‌ಗೆ ಟಿಕೆಟ್ ನೀಡುವ ಮೂಲಕ ಪಕ್ಷದ ವರಿಷ್ಠರು ಪ್ರೋತ್ಸಾಹಿಸಬೇಕು ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರವಾಗಿದೆ. ಪ್ರತಿ ಚುನಾವಣೆಯಲ್ಲೂ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಕಾಂಗ್ರೆಸ್ ಬೆನ್ನೆಲುಬಾಗಿ ನಿಂತಿದ್ದಾರೆ. ಲೋಕಸಭೆ ಚುನಾವಣೆ-2024ರಲ್ಲಿ ಮತದಾರರಾದ ನಾವುಗಳು ಕಾಂಗ್ರೆಸ್ ಪಕ್ಷದಿಂದ ಒಬ್ಬ ಹಿಂದುಳಿದ ವರ್ಗದ ವಿನಯಕುಮಾರ್‌ಗೆ ಅವಕಾಶ ನೀಡುವಂತೆ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಹೈಕಮಾಂಡ್ ವಿನಯಕುಮಾರ್‌ಗೆ ದಾವಣಗೆರೆ ಟಿಕೆಟ್ ನೀಡಲಿ ಎಂದು ಅವರು ಆಗ್ರಹಿಸಿದರು.ಒಬ್ಬ ಹಿಂದುಳಿದ ವರ್ಗದ ವಿದ್ಯಾವಂತ, ಸರಳ ಜೀವಿ, ಯುವಕರ ಮೆಚ್ಚಿನ ಹಳ್ಳಿ ಹುಡುಗ ವಿನಯಕುಮಾರಗೆ ಕಾಂಗ್ರೆಸ್ ಪಕ್ಷ ದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು. ಈ ಮೂಲಕ ಕ್ಷೇತ್ರ, ಜನ, ದೇಶ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ನಮ್ಮ ಜಿಲ್ಲೆಗೆ ಜಾತಿ, ಮತ, ಬೇಧವಿಲ್ಲದೇ ಸರಳ ಸಜ್ಜನಿಕೆಯ ವಿನಯ್ ರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ವಿನಯ್ ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿರುವವರು ಎಂದು ಅವರು ತಿಳಿಸಿದರು.
ಹಿಂದುಳಿದ, ಶೋಷಿತರು, ದೀನ ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ, ಹಳ್ಳಿಯ ಅಭಿವೃದ್ಧಿ ಯಿಂದಲೇ ದೇಶದ ಅಭಿವೃದ್ಧಿಯೆಂದು ಸಾರುವ ಹೊಸ ಮುಖದ ಜಿ.ಬಿ.ವಿನಯಕುಮಾರ ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಬೇಕೆಂಬುದು ಮತದಾರರ ಮನದಾಳದ ಮಾತಾಗಿದೆ. ರಾಜಕೀಯ ಪಕ್ಷಗಳಲ್ಲಿ ಬೇರು ಬಿಟ್ಟಿರುವ ಕುಟುಂಬ ರಾಜ ಕಾರಣಕ್ಕೆ ಇತಿಶ್ರೀ ಹಾಡಲು ಇದೇ ಸೂಕ್ತ ಸಮಯ. ಒಂದು ವೇಳೆ ಜಿ.ಬಿ.ವಿನಯಕುಮಾರ್ ಕಡೆಗಣಿಸಿ, ಟಿಕೆಟ್ ತಪ್ಪಿಸಿದರೆ ಕ್ಷೇತ್ರದಲ್ಲಿ ಅಸಮಾಧಾನ ಉಂಟಾಗಿ, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ.ಎಐಸಿಸಿ ಪ್ಯಾನಲ್‌ನಲ್ಲೂ ಕಡೆಯ ಹಂತದವರಿಗೂ ಜಿ.ಬಿ.ವಿನಯಕುಮಾರ ಹೆಸರೇ ಮುಂಚೂಣಿಯಲ್ಲಿದೆ. ಆದರೆ, ಹಣ, ಒಳ ರಾಜಕಾರಣದ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿಯಬಾರದು. ಒಂದು ವೇಳೆ ಜಿ.ಬಿ.ವಿನಯಕುಮಾರ್‌ಗೆ ಟಿಕೆಟ್ ತಪ್ಪಿದರೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಬಳಗ ಆಲೋಚನೆ ನಡೆಸಿದೆ. ಮಾ.21ರಂದು ವಿನಯಕುಮಾರ ದಾವಣಗೆರೆಗೆ ಬರಲಿದ್ದಾರೆ. ಆ ನಂತರ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಘು ದೊಡ್ಮನಿ ತಿಳಿಸಿದರು.
ಬಳಗದ ಉಮೇಶ ಕೆ.ಸಂತೇಬೆನ್ನೂರು, ಅಲ್ತಾಫ್ ಹುಸೇನ್, ಬಸವನಗೌಡ, ಹೇಮಂತಕುಮಾರ ದಳವಾಯಿ, ಇರ್ಫಾನ್, ಶಿವಕುಮಾರ, ಪರಶುರಾಮ, ನಾಗರಾಜ ಇತರರು ಇದ್ದರು...................................
ಬಾಕ್ಸ್:ದಾವಣಗೆರೆ ಮತ್ತೊಂದು ಮಂಡ್ಯವಾದೀತು!
ದಾವಣಗೆರೆ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷವು ಈ ಸಲ ಗೆಲ್ಲಬಹುದಾದ ಕ್ಷೇತ್ರವಾಗಿದೆ. ವಿನಯಕುಮಾರ್‌ಗೆ ಟಿಕೆಟ್ ಸಿಗದಿದ್ದರೆ, ಇಂತಹದ್ದೊಂದು ಅವಕಾಶವನ್ನೇ ಪಕ್ಷ ಕಳೆದುಕೊಳ್ಳಲಿದೆ. ವಿದ್ಯಾವಂತ ಯುವ ಮುಖಂಡ, ಹಿಂದುಳಿದ ಸಮು ದಾಯವನ್ನು ಕಡೆಗಣಿಸಿದ ಕಳಂಕವು ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತದೆ. ಅಹಿಂದ ವರ್ಗದ ಯುವಕನಿಗೆ ಕಾಂಗ್ರೆಸ್ ಪಕ್ಷ ಅವಕಾಶ ತಪ್ಪಿಸದೆ, ಟಿಕೆಟ್ ನೀಡಬೇಕು. ಕಳೆದ ಸಲ ಮಂಡ್ಯದಂತೆ ದಾವಣಗೆರೆಯೂ ಸ್ವಾಭಿಮಾನದ ಪ್ರತಿಷ್ಠೆಯ ಕಣವಾಗುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿಮಾನಿಗಳ ಬಳಗವು ಎಚ್ಚರಿಸಿದೆ.........................
ಕ್ಯಾಪ್ಷನ್: 20ಕೆಡಿವಿಜಿ62: ದಾವಣಗೆರೆಯಲ್ಲಿ ಬುಧವಾರ ಲೋಕಸಭಾ ಕ್ಷೇತ್ರದ ಅಭಿಮಾನಿಗಳ ಬಳಗದ ರಾಘು ದೊಡ್ಮನಿ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.