ನರೇಗಲ್ಲ: ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅಪಾಯಕಾರಿ. ಯಾರು ಸಂವಿಧಾನದ ತಂಟೆಗೆ ಬರುತ್ತಾರೋ ಅವರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ರೋಣ ಶಾಸಕ ಜಿ. ಎಸ್. ಪಾಟೀಲ ತಿಳಿಸಿದರು.ಜೈಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಮತ್ತು ಜಿ.ಎಸ್. ಪಾಟೀಲ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಾವು ದಲಿತರು, ಹಿಂದುಳಿದವರು ಎನ್ನುವ ಬದಲು ನಾವು ಸಮಾನರು ಎನ್ನಬೇಕು. ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಗೌಡಕಿ ಆಡಲಿತದಲ್ಲಿದ್ದ ತಾರತಮ್ಯ ಈಗ ಇಲ್ಲ. ಡಾ. ಬಾಬಾ ಸಾಹೇಬರು ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನತೆಯಿಂದ, ಸಹಬಾಳ್ವೆಯಿಂದ ಬದುಕಬಹುದಾಗಿದೆ ಎಂದರು.
ದೇಶದ ಸಂವಿಧಾನ ಬದಲಿಸುವ ಕುರಿತು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾವು 70 ವರ್ಷಗಳಿಂದ ಸಂವಿಧಾನವನ್ನು ಕಾಪಾಡಿಕೊಂಡು ಬಂದು ಅದರ ಆಶಯದಂತೆ ಬದುಕಿದ್ದೇವೆ. ಮುಂದಿನ ಪೀಳಿಗೆಯೂ ಸಂವಿಧಾನವನ್ನು ಕಾಪಾಡುವ ಮತ್ತು ಕರ್ತವ್ಯಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊರಬೇಕಿದೆ. ಅದೇ ಕಾರಣಕ್ಕಾಗಿ ಇಂದಿನ ಕಾರ್ಯಕ್ರಮದ ದೀಪ ಬೆಳಗುವಿಕೆ ಹಾಗೂ ಉದ್ಘಾಟನೆಯನ್ನು ಯುವ ನಾಯಕರಿಂದ ಮಾಡಿಸಿರುವೆ ಎಂದರು.ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಸಮಾನತೆಯಿಂದ ಬದುಕು ನೀಡಿದ್ದಾರೆ. ಅದಕ್ಕಾಗಿ ಸಂವಿಧಾನ ಉಳಿಸಲು ಮುಂದಾಗಬೇಕು. ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜ ಸುಧಾರಣೆಗಾಗಿ ಹೋರಾಡಿದ ಮಹಾನ್ ದಾರ್ಶನಿಕರಾದ ಡಾ. ಬಾಬು ಜಗಜೀವನ್ ರಾಂ ಅವರ ಸಾಧನೆ, ಬದುಕುಗೆ ಮಾದರಿಯಾಗಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುನ್ನತವಾಗಿದೆ. ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದರು. ಭಾರತೀಯ ಕೃಷಿಯ ಆಧುನೀಕರಣಕ್ಕೆ ಕೊಡುಗೆ ನೀಡಿದ ಡಾ. ಬಾಬು ಜಗಜೀವನರಾಂ ಅವರ ಪ್ರಯತ್ನದ ಹಸಿರುಕ್ರಾಂತಿಯಿಂದಾಗಿ ದೇಶದಲ್ಲಿ ಆಹಾರ ಕೊರತೆ ದೂರವಾಯಿತು ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಪ್ರತಿಯೊಬ್ಬ ಭಾರತೀಯನಲ್ಲೂ ಸಹೋದರತ್ವದ ಭಾವನೆ ಇರಬೇಕು ಎಂದರು.ಬಾಗಲಕೋಟೆ ಯುವ ಮುಖಂಡ ವಿನಯ ಆರ್. ತಿಮ್ಮಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ಆಯೋಜಕ ಮೈಲಾರಪ್ಪ ಚಳ್ಳಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಣ ಬೂದಿಶ್ವರಮಠದ ಡಾ. ವಿಶ್ವನಾಥ ಸ್ವಾಮಿಗಳು, ನರೇಗಲ್ಲನ ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು, ಸೂಡಿ ಮರುಳು ಶಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ವಿಜಯ ಕಲ್ಮನಿ, ಶರಣಪ್ಪ ಬೆಟಗೇರಿ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಗುಡದಪ್ಪ ಗೋಡಿ, ಎ.ಸಿ. ಪಾಟೀಲ, ಯುಸೂಫ್ ಇಟಗಿ, ಎಂ.ಎಸ್. ಧಡೇಸೂರಮಠ, ಮುತ್ತಪ್ಪ ನೂಲ್ಕಿ, ಹನುಮಂತಪ್ಪ ದ್ವಾಸಲ, ಸದ್ದಾಂ ನಶೇಖಾನ ಇತರರು ಇದ್ದರು.ಶಾಸಕ ಜಿ.ಎಸ್. ಪಾಟೀಲರಿಗೆ ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ ಪ್ರದಾನ
ರೋಣ ಶಾಸಕ ಜಿ.ಎಸ್. ಪಾಟೀಲ ಅವರು ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿ, ಕ್ಷೇತ್ರದ ಯುವಕರಿಗೆ ಉದ್ಯೋಗದ ವ್ಯವಸ್ಥೆ ಮಾಡಿಸಿದ್ದಕ್ಕಾಗಿ, ನೆಲ, ಜಲ ಸಂರಕ್ಷಣೆಗೆ ಮಿಡಿಯುತ್ತಿರುವ ಕಾರಣಕ್ಕಾಗಿ ಹಾಗೂ ಏಳು ದಶಕದಿಂದ ಕ್ಷೇತ್ರದ ಜನರೊಂದಿಗೆ ಬೆರೆತಿದ್ದಕ್ಕಾಗಿ ಸಂಘಟನೆಯವರು ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಂತರ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಬೈಲಪ್ಪ ತಳವಾರ, ಬಿ.ವಿ. ಗೌಡರ, ಅರುಣ ಕುಲಕರ್ಣಿ, ವಿ.ಎ. ಕುಂಬಾರ, ಈಶಯ್ಯ ಕಲ್ಲೂರ, ಹನುಮಪ್ಪ ಅಬ್ಬಿಗೇರಿ, ಸುರೇಶ ಹಳ್ಳಿಕೇರಿ ಹಾಗೂ ಚಂದ್ರು ಎಂ. ರಾಥೋಡ್ ಅವರನ್ನು ಸನ್ಮಾನಿಸಲಾಯಿತು.