ನಮ್ಮ ಸಂಸ್ಕಾರ ಉತ್ತಮವಾಗಿದ್ದರೆ ಮಾತ್ರ ನಮ್ಮ ಸರ್ವಾಂಗೀಣ ವಿಕಾಸವಾಗುತ್ತದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ನಮ್ಮ ಸಂಸ್ಕಾರ ಉತ್ತಮವಾಗಿದ್ದರೆ ಮಾತ್ರ ನಮ್ಮ ಸರ್ವಾಂಗೀಣ ವಿಕಾಸವಾಗುತ್ತದೆ ಎಂದು ಶಂಕರಾಚಾರ್ಯ ಸಂಸ್ಥಾನ ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ದೈವಜ್ಞ ದರ್ಶನ ಕಾರ್ಯಕ್ರಮದ ಪ್ರಯುಕ್ತ ಸೋನಾರಕೇರಿಯ ಗಣಪತಿ, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ದೈವಜ್ಞ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾಯಿಯಂದಿರಿಂದಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಿದೆ. ತಾಯಿಯಂದಿರು ತಮ್ಮ ಮಕ್ಕಳಿಗೆ ಉಚಿತವಾದ ಆಹಾರ- ಆಚಾರ- ವಿಚಾರ- ಸಂಸ್ಕಾರಗಳನ್ನು ತಿಳಿಸಿಕೊಡುವುದರಿಂದ ಅದು ಶಾಶ್ವತವಾಗಿ ಉಳಿದುಕೊಂಡಿದೆ ಎಂದ ಅವರು, ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಶ್ರೀಕ್ಷೇತ್ರ ಕರ್ಕಿಯಲ್ಲಿ ಸ್ಥಾಪಿಸಲಾದ ದೈವಜ್ಞ ಶ್ರೀ ಮಠವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯಗಳನ್ನು ಪೂರೈಸುತ್ತಾ ಮುಂದುವರೆಯುತ್ತಿದೆ ಎಂದರು.

ಧರ್ಮಸಭೆಯಲ್ಲಿ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸತ್ಯ ಪ್ರೀತಿ ವಿನಯಗಳಿಗೆ ಮಾತ್ರ ಜಗತ್ತಿನಲ್ಲಿ ಗೌರಬವಿದೆ. ನಾವು ಬಾಗಿ ಭಾಗ್ಯವಂತರಾಗಬೇಕು. ಅಹಂಕಾರ ಬಿಡಬೇಕು. ಅಹಂಕಾರವು ನಮ್ಮ ಪ್ರಗತಿಗೆ ದೊಡ್ಡ ಅಡ್ಡಿಯಾಗಿದೆ ಎಂದು ನುಡಿದರು.

ಪಟ್ಟಣದ ಮುಖ್ಯವೃತ್ತದಿಂದ ಸೋನಾರ ಕೇರಿಯಲ್ಲಿರುವ ದೈವಜ್ಞ ಸಭಾಭವನದವರೆಗೆ ಬೈಕ್ ರ್‍ಯಾಲಿ, ಮಹಿಳೆಯರ ನೃತ್ಯ ಭಜನೆ ಮತ್ತು ಶೋಭಾಯಾತ್ರೆಯ ಮೂಲಕ ಸ್ವಾಮೀಜಿದ್ವಯರನ್ನು ಬರಮಾಡಿಕೊಳ್ಳಲಾಯಿತು. ನಂತರ ನಡೆದ ಧರ್ಮಸಭೆಯಲ್ಲಿ ಶ್ರೀ ವೆಂಕಟೇಶ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಪಾಂಡುರಂಗ ಶೇಟ್ ದಂಪತಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ದೈವಜ್ಞ ಸಮಾಜದ ವತಿಯಿಂದ ಗುರುಗಳಿಗೆ ಗುರುಕಾಣಿಕೆ ಅರ್ಪಿಸಲಾಯಿತು.

ಮುರುಡೇಶ್ವರದ ರಾಮದಾಸ್ ಶೇಟ್ ಮತ್ತು ಜಿಲ್ಲಾ ದೈವಜ್ಞ ವಾಹಿನಿಯ ಅಧ್ಯಕ್ಷೆ ಶಕುಂತಲಾ ರಾಮದಾಸ ಶೇಟ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತ ವ್ಯವಸ್ಥಾಪಕ ಗುರುನಾಥ ಕೊಲ್ಲೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಸುನೀಲ ರತ್ನಾಕರ ಶೇಟ್ ಸ್ವಾಗತಿಸಿದರೆ, ಸಾಹಿತಿ ಶ್ರೀಧರ ಶೇಟ್ ಶಿರಾಲಿ ನಿರೂಪಿಸಿದರು. ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ ಶೇಟ್ ವಂದಿಸಿದರು. ಸಂದೀಪ್ ಕೊಲ್ಲೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತಾಲೂಕಿನ ಶಿರಾಲಿ, ಮುರುಡೇಶ್ವರ, ಬೈಲೂರು ಮತ್ತು ಗೊರ್ಟೆಯ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.