ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವುದರಿಂದ ಕರ್ನಾಟಕ ಪೊಲೀಸರ ಬಗ್ಗೆ ಅಪನಂಬಿಕೆ ಮೂಡುವಂತಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ಕ್ಷೇತ್ರ ವ್ಯಾಪ್ತಿಯ ನೀಲಕಂಠನಹಳ್ಳಿ, ಕೆ.ಹಾಗಲಹಳ್ಳಿ ಹಾಗೂ ಭೀಮನಕೆರೆ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣ ವಿಚಾರವಾಗಿ ಯೂಟ್ಯೂಬರ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದಿಂದ ಹಣ ಹರಿದು ಬರುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ನಿಖಿಲ್ ತಂದೆ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ರಾಜ್ಯದ ಪೊಲೀಸರ ಸಾಮರ್ಥ್ಯ ಗೊತ್ತಿಲ್ಲವೇ. ಕೇಂದ್ರದ ತನಿಖಾ ಸಂಸ್ಥೆಗಳಿಂದ ನಮ್ಮ ರಾಜ್ಯದ ಪೊಲೀಸರು ಹೆಚ್ಚು ಬಲಶಾಲಿಗಳಾಗಿದ್ದಾರೆ ಎನ್ನುವುದಕ್ಕೆ ಈಗಾಗಲೇ ಬಯಲಿಗೆ ತಂದಿರುವ ಸಾಕಷ್ಟು ಪ್ರಕರಣಗಳು ನಿದರ್ಶನವಾಗಿದೆ ಎಂದರು.ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಕೊನೇ ಹಂತ ತಲುಪುವ ಮುನ್ನವೇ ಎನ್ಐಎ ವಹಿಸುವಂತೆ ನಿಖಿಲ್ ಹೇಳಿಕೆ ಸರಿಯಲ್ಲ. ಇದರಿಂದ ಜನರಲ್ಲಿ ರಾಜ್ಯದ ಪೊಲೀಸರ ಬಗ್ಗೆ ಅಪನಂಬಿಕೆ ಉಂಟಾಗುತ್ತದೆ ಎಂದರು.
ಚಾಮುಂಡೇಶ್ವರಿ ದೇಗುಲ ಉಳಿಸಿ ಬಿಜೆಪಿ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ದೇವಾಲಯ, ಮಸೀದಿ ಅಥವಾ ಚರ್ಚ್ ಗಳಿಗೆ ಹೋಗಲು ಯಾವುದೇ ಜಾತಿ, ಪಂಥಗಳಿಗೆ ನಿರ್ಬಂಧವಿಲ್ಲ. ನಾನು ಸಹ ಹಬ್ಬ, ಹರಿ ದಿನಗಳಲ್ಲಿ ಮಸೀದಿ, ಚರ್ಚ್ ಮತ್ತು ದೇವಾಲಯಗಳಿಗೆ ಸಾಕಷ್ಟು ಸಲ ಭೇಟಿ ನೀಡಿದ್ದೇನೆ. ಹೀಗಾಗಿ ನನ್ನ ಹಿಂದುತ್ವ ಬದಲಾಗಿದೆಯೇ ಎಂದು ಪ್ರಶ್ನಿಸಿದರು.ಬಾನು ಮಷ್ತಾಕ್ ಅವರು ಮಡಿ ಸೀರೆ ಧರಿಸಿ, ಅರಿಶಿನ ಕುಂಕುಮ ಹಚ್ಚಿ ಸಂಪ್ರದಾಯಕ್ಕೆ ಗೌರವ ನೀಡಿ ದಸರಾ ಉದ್ಘಾಟಿಸಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಂಪ್ರದಾಯ ಆಚರಣೆ ಅವರ ಸ್ವಂತ ವಿಚಾರ. ಬಾನು ಮಷ್ತಾಕ್ ಕೂಡ ರಾಜ್ಯದ ಪ್ರಜೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಕೋಮು ಸಂಘರ್ಷ, ಮತಾಂತರ ಹಾಗೂ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವಲ್ಲಿ ಬಿಜೆಪಿ ಎತ್ತಿದ ಕೈ. ಇಂತಹ ಕೃತ್ಯಗಳಿಂದಲೇ ಕೋಮು ಸಂಘರ್ಷ ನಡೆಯುತ್ತಿದೆ ಎಂದು ಟೀಕಿಸಿದರು.ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಈ ಸಂದರ್ಶ, ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ನೀಲಕಂಠನಹಳ್ಳಿ ರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್.ಡಿ.ರಾಜು, ಮುಖಂಡರಾದ ಎನ್.ಕೆ. ಜಗದೀಶ, ಯತೀಶ್ ಕುಮಾರ್, ಪುಟ್ಟರಾಮು ಮತ್ತಿತರರು ಇದ್ದರು.