ಸಾರಾಂಶ
ಪರಿಸರ ಜಾಗೃತಿಯಲ್ಲಿ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಅಭಿಮತ
ಕನ್ನಡಪ್ರಭವಾರ್ತೆ, ಚಿತ್ರದುರ್ಗಗಿಡ-ಮರ ನೆಟ್ಟು ಪರಿಸರ ಉಳಿಸದಿದ್ದರೆ ಸಕಲ ಜೀವರಾಶಿಗಳಿಗೂ ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತು ಕಾದಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಚಿತ್ರದುರ್ಗ ಯೋಜನಾ ಕಚೇರಿಯಿಂದ ಮದಕರಿಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಟ್ಟು ನಂತರ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಹಾಳು ಮಾಡುವ ಬದಲು ಸಂರಕ್ಷಿಸಬೇಕಾಗಿದೆ. 40 ವರ್ಷಗಳ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಹುಟ್ಟು ಹಾಕಿ ಪರಿಸರ ರಕ್ಷಣೆಗೆ ಒತ್ತು ಕೊಡುತ್ತಿದ್ದಾರೆ. ಗಿಡ ನೆಟ್ಟರೆ ಸಾಲದು. ನೀರುಣಿಸಿ ಪೋಷಿಸಿದಾಗ ದೊಡ್ಡ ಮರವಾಗಿ ಬೆಳೆಯುತ್ತದೆ. ಮುಂದಿನ ಪೀಳಿಗೆಗೆ ಹಸಿರು ಪರಿಸರ ಕೊಡುಗೆಯಾಗಿ ನೀಡಬೇಕಿದೆ ಎಂದರು.ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡಿ, 700 ಬಗೆಯ ವಿಷ ರಾಸಾಯನಿಕಗಳು ಗಾಳಿಯಲ್ಲಿವೆ. ಗಾಳಿ, ನೀರು, ಮಣ್ಣು ಕಲುಷಿತಗೊಂಡಿದೆ. ಸರ್ಕಾರ ಕಠಿಣ ಕಾನೂನು ನೀತಿ ನಿಯಮಗಳನ್ನು ರೂಪಿಸಿದಾಗ ಮಾತ್ರ ಗಿಡ ಮರಗಳು ಉಳಿಯಲು ಸಾಧ್ಯ ಎಂದರು.
ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಮ್, ಮದಕರಿಪುರ ಗ್ರಾಪಂ ಪಿಡಿಒ ನಾಗರಾಜ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಯೋಜನೆ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್, ಶಾಲೆಯ ಮುಖ್ಯ ಶಿಕ್ಷಕಿ ರೇಖ, ಒಕ್ಕೂಟದ ಅಧ್ಯಕ್ಷೆ ಶಿಲ್ಪ, ಎಸ್.ಡಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ವಲಯ ಮೇಲ್ವಿಚಾರಕ ನಿಜಲಿಂಗಪ್ಪ, ಕೃಷಿ ಮೇಲ್ವಿಚಾರಕ ಸುರೇಶ್, ಸಿಆರ್‌ಪಿ ಶಿವರುದ್ರಪ್ಪ, ಲಕ್ಷ್ಮಣ್ ಇದ್ದರು.