ಸಾರಾಂಶ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ರೈತ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು ಈ ವರೆಗೂ ಸಿಕ್ಕಿಲ್ಲ
ನರಗುಂದ: ನಮ್ಮ ದೇಶದಲ್ಲಿ ಕೃಷಿ ಪ್ರಧಾನವಾದುದು. ಹೀಗಾಗಿ ಈ ದೇಶದಲ್ಲಿ ಸರ್ಕಾರಗಳು ರೈತ ಕುಲಕ್ಕೆ ಅನ್ಯಾಯ ಮಾಡಿದರೆ ಅಂತಹ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ಅವರ 122ನೇ ಜನ್ಮದಿನ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ರೈತ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು ಈ ವರೆಗೂ ಸಿಕ್ಕಿಲ್ಲ. ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರ ರೈತರ ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿ ಬೆಂಬಲ ಬೆಲೆ ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ತೊಂದರೆಗೊಳಗಾದ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಸರಿಯಾದ ಸಮಯಕ್ಕೆ ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಪ್ರತ್ಯೇಕ ರಾಜ್ಯಕ್ಕೆ ಹೋರಾಟ:
ರೈತರು 10 ವರ್ಷಗಳಿಂದ ಮಹದಾಯಿ, ಕಳಸಾ-ಬಂಡೂರಿ ಯೋಜನೆಗಾಗಿ ಹೋರಾಡುತ್ತಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆ ಜಾರಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. 2025ರ ಜನವರಿ ತಿಂಗಳಲ್ಲಿ ಸರ್ಕಾರ ಈ ಯೋಜನೆ ಜಾರಿ ಮಾಡದಿದ್ದರೆ ನಾವು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದು ಸಾಬಳೆ ಎಚ್ಚರಿಕೆ ನೀಡಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ರೈತರು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಮಾಡಿಕೊಂಡ ರೈತರಿಗೆ 15 ದಿನದಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ವಿಮಾ ಕಂಪನಿಗಳು ಹೇಳಿವೆ ಎಂದರು.
ಚನ್ನು ನಂದಿ, ರವಿ ಒಡೆಯರ, ಎಂ.ಜಿ. ಹುಯಿಲಗೋಳ, ರವಿ ಲದ್ದಿ, ಈರಪ್ಪ ಮೇಟಿ, ಬಿ.ಎಸ್. ಪಠಾಣ, ಕೃಷಿ ಇಲಾಖೆ ಸಿಬ್ಬಂದಿ ಇದ್ದರು.