ಸಾರಾಂಶ
ಕಾಂಗ್ರೆಸ್ ಸರ್ಕಾರಕ್ಕೆ ನಾಡಪ್ರಭು ಕೆಂಪೇಗೌಡರ ಮೇಲೆ ಗೌರವವಿದ್ದರೆ ಕೆಂಪೇಗೌಡರು ಕಟ್ಟಿಸಿರುವ ಪಟ್ಟಣದ ಐತಿಹಾಸಿಕ ಸೋಮೇಶ್ವರ ಸ್ವಾಮಿ ದೇವಸ್ಥಾನದ ಗೋಪುರ ಕಳಶ ಸ್ಥಾಪನೆ ಮಾಡಿ ತಾಲೂಕಿಗೆ ಒಳಿತನ್ನು ಮಾಡಬೇಕು. ಮಾಜಿ-ಹಾಲಿ ಶಾಸಕರು ಸೋಮೇಶ್ವರಸ್ವಾಮಿ ದೇವಸ್ಥಾನ ಕಳಶ ಸ್ಥಾಪನೆ ಬಗ್ಗೆ ಚರ್ಚೆಯೇ ಮಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಾಗಡಿ
ಕಾಂಗ್ರೆಸ್ ಪಕ್ಷಕ್ಕೆ ಧೈರ್ಯವಿದ್ದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಮಾಡಲಿ ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಸವಾಲು ಹಾಕಿದರು.ಹೊಸಪೇಟೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮಾಡಲು ಧೈರ್ಯವಿಲ್ಲ. ಅದಕ್ಕಾಗಿ ಪಂಚಾಯಿತಿ ಚುನಾವಣೆ ಮಾಡಲು ಹಿಂಜರಿಯುತ್ತಿದೆ. 2026ಕ್ಕೆ ಸಾರ್ವತ್ರಿಕ ಚುನಾವಣೆ ಆದರೂ ಅನುಮಾನ ಪಡುವಂತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಜೋರಾಗಿಯೇ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಪುರಸಭಾ ಚುನಾವಣೆ ನಡೆಸಬೇಕು. ಇವರು ಯಾವುದೇ ಚುನಾವಣೆ ಮಾಡಲು ಮುಂದೆ ಬರುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಸೋಮೇಶ್ವರ ದೇವಸ್ಥಾನ ಕಳಶ ಸ್ಥಾಪನೆ ಮಾಡಿ: ಕಾಂಗ್ರೆಸ್ ಸರ್ಕಾರಕ್ಕೆ ನಾಡಪ್ರಭು ಕೆಂಪೇಗೌಡರ ಮೇಲೆ ಗೌರವವಿದ್ದರೆ ಕೆಂಪೇಗೌಡರು ಕಟ್ಟಿಸಿರುವ ಪಟ್ಟಣದ ಐತಿಹಾಸಿಕ ಸೋಮೇಶ್ವರ ಸ್ವಾಮಿ ದೇವಸ್ಥಾನದ ಗೋಪುರ ಕಳಶ ಸ್ಥಾಪನೆ ಮಾಡಿ ತಾಲೂಕಿಗೆ ಒಳಿತನ್ನು ಮಾಡಬೇಕು. ಮಾಜಿ-ಹಾಲಿ ಶಾಸಕರು ಸೋಮೇಶ್ವರಸ್ವಾಮಿ ದೇವಸ್ಥಾನ ಕಳಶ ಸ್ಥಾಪನೆ ಬಗ್ಗೆ ಚರ್ಚೆಯೇ ಮಾಡುತ್ತಿಲ್ಲ.103 ಕೋಟಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿರುವುದು ಸ್ವಾಗತಾರ್ಹ. ಆದರೆ ಕೋಟೆಯಲ್ಲಿ ಏನು ಕಾಮಗಾರಿ ಮಾಡ್ತೀರಾ ಎಂಬುದನ್ನು ಬಹಿರಂಗಪಡಿಸಬೇಕು. ಕೇವಲ ಮಣ್ಣು ಎತ್ತಿ ಸಿಮೆಂಟ್ ಹಾಕಿದರೆ ಏನೋ ಪ್ರಯೋಜನವಿಲ್ಲ. ಕೆಂಪೇಗೌಡರಿಗೆ ಗೌರವ ತರುವ ಕೆಲಸ ಆಗಬೇಕು. ಹಿಂದೆ ಕೆಂಪೇಗೌಡರ ಐಕ್ಯ ಸ್ಥಳ ಕೆಂಪಾಪುರವನ್ನು ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯನವರ ಬಳಿ ಕಳೆದ ಅವಧಿಯಲ್ಲಿ ಪಕ್ಷಾತೀತವಾಗಿ ಕೆಂಪೇಗೌಡ ಪ್ರಾಧಿಕಾರ ಸಮಿತಿ ರಚನೆ ಮಾಡಿಸಲು ಪಟ್ಟುಹಿಡಿದು ಮಾಡಿಸಿದ್ದು ನಾವು. ಕೆಂಪೇಗೌಡರ ಮೇಲೆ ಗೌರವವಿದ್ದರೆ ಸ್ಮಾರಕ ಮತ್ತು ದೇವಾಲಯ ಅಭಿವೃದ್ಧಿ ಪಡಿಸಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಈ ವೇಳೆ ಬಿಜೆಪಿ ಮುಖಂಡರಾದ ಎಂ.ಆರ್, ರಾಘವೇಂದ್ರ, ಸೋಮೇಶ್ವರ ಕಾಲೋನಿ ಶೆಶಿಧರ್, ಗೋವಿಂದರಾಜು, ಬಾಸ್ಕರ್, ಅಂಜನ್, ಮುಖ್ಯ ಶಿಕ್ಷಕ ನಾಗರಾಜು, ಸಿದ್ದರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ರಂಗನಾಥ್, ಮಣಿ, ಮಾರಪ್ಪ, ಇತರರಿದ್ದರು.