84.58 ಲಕ್ಷ ರು. ವೆಚ್ಚದಲ್ಲಿ ಮುತ್ತುಗದೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿ ಪೂಜೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ನಮ್ಮ ರೈತರು ಆಳುವ ಸರ್ಕಾರಗಳಿಂದ ಬೇಡುವುದು ಸಮರ್ಪಕ ನೀರು ಮತ್ತು ವಿದ್ಯುತ್‌ ಮಾತ್ರ. ಈ ಎರಡನ್ನು ಸರಿಯಾಗಿ ಒದಗಿಸಿದರೆ ಅವರ ಬದುಕು ಹಸನಾಗಿರುತ್ತದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಸಮೀಪದ ಮುತ್ತುಗದೂರು ಗ್ರಾಮದಲ್ಲಿ 84.58 ಲಕ್ಷ ರು.ಗಳಲ್ಲಿ ನಿರ್ಮಾಣವಾಗಲಿರುವ ಉಪ ಆರೋಗ್ಯ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿನ ರೈತರ ಈ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೇಕಾದ ನೀರು ಮತ್ತು ವಿದ್ಯುತ್‌ ಕೊಡುವ ಹೊಣೆಗಾರಿಕೆಯನ್ನು ಪೂರೈಸುತ್ತಿದ್ದೇನೆ. ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ನನಗೆ ಸಂತೋಷ ತಂದಿದೆ.

ಕ್ಷೇತ್ರದ ಹಲವಾರು ಕೆರೆಗಳನ್ನು ಈಗಾಗಲೇ ತುಂಬಿಸಲಾಗಿದೆ. ಭದ್ರಾ ಮೇಲ್ಡಂಡೆ ಯೋಜನೆಯ ವ್ಯಾಪ್ತಿಗೆ ಬರುವ ಕೆರೆಗಳನ್ನು ಇನ್ನೆರಡು ತಿಂಗಳಲ್ಲಿ ತುಂಬಿಸಲಾಗುವುದು. ಅಂತರ್ಜಲಮಟ್ಟ ಸುಧಾರಿಸಲು ಕ್ಷೇತ್ರದಾದ್ಯಂತ ನೂರಾರು ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಚಿಕ್ಕ ಕೆರೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಅವರಿಗೆ ನೆರವಾಗಿರುವುದನ್ನು ರೈತರಿಂದ ಕೇಳಿದಾಗ ಸಂತೋಷವಾಗುತ್ತಿದೆ ಎಂದರು.

ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳು ನನ್ನ ಮುಂದಿವೆ. ಅವುಗಳನ್ನು ತ್ವರಿತವಾಗಿ ಮಾಡಲು ಮುಂದಾಗಿದ್ದೇನೆ. ಕ್ಷೇತ್ರದ 17 ಕಡೆ ವಿದ್ಯುತ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಹದಿಮೂರುವರೆ ಎಕರೆ ಜಾಗದಲ್ಲಿ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಜೋಗ್‍ಫಾಲ್ಸ್‌ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದ್ದು, ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಸಲಾಗುವುದೆಂದರು.

ಭದ್ರಾ ಯೋಜನೆ ಹಾಗೂ ಎತ್ತಿನಹೊಳೆಯಿಂದ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ತಾಲೂಕಿನಲ್ಲಿರುವ ಪ್ರತಿ ಮನೆ ಮನೆಗೆ ವಿ.ವಿ.ಸಾಗರದಿಂದ ಶುದ್ಧ ಕುಡಿಯುವ ನೀರು ನೀಡುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಪೈಪ್‍ಲೈನ್ ಅಳವಡಿಕೆ ಕಾರ್ಯ ಮುಗಿದಿದೆ. ಬ್ರಿಟೀಷರ ಕಾಲದ ಹಳೆಯ ಶಾಲೆಗಳನ್ನು ಕೆಡವಿ ಗುಣಮಟ್ಟದ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ತಾಲೂಕಿನ 13 ಕಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಒಂದೊಂದು ಶಾಲೆಗಳ ನಿರ್ಮಾಣಕ್ಕೆ ಹತ್ತು ಕೋಟಿ ರು. ಕೊಡುತ್ತೇನೆ. ಕ್ಷೇತ್ರದ 493 ಹಳ್ಳಿಗಳ ಜನ ಎದೆತಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕೆಂಬುದು ನನ್ನ ಆಸೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡಿರುವುದರಿಂದ ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ, ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಶ್ರಮ ಹಾಕಿ ಸರ್ಕಾರದಲ್ಲಿ ಹೋರಾಟ ಮಾಡಿ ಅನುದಾನ ತಂದು ಪ್ರತಿನಿತ್ಯವೂ ಒಂದಲ್ಲ ಒಂದು ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆಂದರು.

ಹೊಳಲ್ಕೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಿದ್ದೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪ್ರಭುಕುಮಾರ್, ಮೋಹನ್, ಶಿವಕುಮಾರ್, ನಟರಾಜ್, ಪ್ರಕಾಶ್, ಮಂಜುನಾಥ್, ಶಿವಕುಮಾರ್, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.