ಗೌಡರು ರಾಮನಗರಕ್ಕೆ ಬರದಿದ್ದರೆ ಡಿಕೆ ಬ್ರದರ್ಸ್‌ ಬೆಳೀತಿರಲಿಲ್ಲ

| Published : Apr 11 2024, 12:48 AM IST

ಗೌಡರು ರಾಮನಗರಕ್ಕೆ ಬರದಿದ್ದರೆ ಡಿಕೆ ಬ್ರದರ್ಸ್‌ ಬೆಳೀತಿರಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದು, ರಾಮನಗರ ಜಿಲ್ಲೆಗೆ ದೇವೇಗೌಡರ ಕುಟುಂಬ ಬರದಿದ್ದರೆ ಡಿ.ಕೆ. ಸಹೋದರರು ರಾಜ್ಯಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಮಾಗಡಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದು, ರಾಮನಗರ ಜಿಲ್ಲೆಗೆ ದೇವೇಗೌಡರ ಕುಟುಂಬ ಬರದಿದ್ದರೆ ಡಿ.ಕೆ. ಸಹೋದರರು ರಾಜ್ಯಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರ ಕುಟುಂಬ ರಾಮನಗರಕ್ಕೆ ಬರದಿದ್ದರೆ ನೀವು ರಾಜ್ಯಮಟ್ಟದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನಲ್ಲಿ ಗುರುತಿಸಿಕೊಳ್ಳಲು ಆಗುತಿರಲಿಲ್ಲ. ನಮ್ಮ ನಾಯಕರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿಕೊಂಡು ಎತ್ತರಕ್ಕೆ ಬೆಳೆದಿದ್ದೀರಾ? ಮಾಜಿ ಪ್ರಧಾನಿ ದೇವೇಗೌಡರಾಗಲಿ, ಎಚ್.ಡಿ. ಕುಮಾರಸ್ವಾಮಿಯವರಾಗಲಿ ನಿಮ್ಮ ಮನೆ ಬಾಗಿಲಿಗೆ ಬಂದು ನಮ್ಮನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿಯನ್ನಾಗಿಸಿ ಎಂದು ಕೇಳಿಲ್ಲ. ನಿಮ್ಮ ಪಕ್ಷಕ್ಕೆ ಅನಿವಾರ್ಯವಿದ್ದ ಕಾರಣ ದೇವೇಗೌಡರ ಮನೆ ಬಾಗಿಲಿಗೆ ಬಂದು ಅಧಿಕಾರ ಬಿಟ್ಟು ಕೊಟ್ಟಿದ್ದೀರಾ, ಅಧಿಕಾರ ಇದ್ದಾಗ ನೀವು ಯಾವ ರೀತಿ ದೇವೇಗೌಡರ ಕುಟುಂಬವನ್ನು ಉಪಯೋಗಿಸಿಕೊಂಡು ಹಣ ಮಾಡಿರುವಿರಿ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಈಗ ಅವರ ಕುಟುಂಬದ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ, ಜನತೆ ಈ ಬಾರಿ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಡಿ.ಕೆ.ಸಹೋದರರ ವಿರುದ್ಧ ಮಾಜಿ ಶಾಸಕರು ವಾಗ್ದಾಳಿ ನಡೆಸಿದರು.

ಹೇಮಾವತಿ ಯೋಜನೆಯಲ್ಲೂ ನನ್ನ ಶ್ರಮವಿದೆ:

ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಾಲಕೃಷ್ಣರವರು ಹೇಮಾವತಿ ವಿಚಾರವಾಗಿ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಾನು ಕೂಡ ಹೇಮಾವತಿ ಯೋಜನೆ ಹಿಂದೆ ಬಿದ್ದು 18 ಕಿಮೀ ಹಾಗೂ 15 ಕಿಲೋಮೀಟರ್ ಎರಡು ಭಾಗಗಳಲ್ಲಿ ಪೈಪ್‌ಲೈನ್ ಹಾಕಿಸಲು ಕಷ್ಟಪಟ್ಟಿದ್ದೇನೆ. ನೀವೇ ರೈತರನ್ನು ಎತ್ತಿಕಟ್ಟಿ ಪೈಪ್‌ಲೈನ್ ಹಾಕಿಸಲು ತೊಂದರೆ ಕೊಟ್ಟಿದ್ದೀರಾ?. ಶಾಸಕ ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್ ಇಬ್ಬರೂ ಸ್ಥಳಕ್ಕೆ ಬರಲಿ, ನಾನು ಕೂಡ ಕಾಮಗಾರಿ ಎಷ್ಟು ನಡೆದಿದೆ ಎಂಬುದನ್ನು ತೋರಿಸುತ್ತೇನೆ ಎಂದು ಎ.ಮಂಜುನಾಥ್ ತಿರುಗೇಟು ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು:

ಶಾಸಕ ಬಾಲಕೃಷ್ಣರವರು ಎಚ್.ಡಿ.ಕುಮಾರಸ್ವಾಮಿಯವರಿಗೆ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ, ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವ ಮುನ್ನ ಸಿನಿಮಾ ವಿತರಕರು, ಸಿನಿಮಾ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ವ್ಯವಸಾಯದಲ್ಲೂ ಆದಾಯ ಗಳಿಸುತ್ತಿದ್ದು, ಅವರ ಮಗ ನಿಖಿಲ್ ಕುಮಾರಸ್ವಾಮಿ ಸಿನಿಮಾ ನಾಯಕ ನಟರಾಗಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಕಿಡಿಕಾರಿದರು.(ಫೋಟೊ ಕ್ಯಾಫ್ಷನ್‌)

ಮಾಗಡಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು.