ಸಾರಾಂಶ
ಚನ್ನರಾಯಪಟ್ಟಣ: ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಂ.ಪಿ.ಪ್ರಕಾಶ್ ಗೌಡ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನಾ ಸಮಿತಿ ಸಭೆಯಲ್ಲಿ ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ನಡೆಯುವ ಸಾರ್ವಜನಿಕ ಸಭೆ ಸಮಾರಂಭ ಹಾಗೂ ಜಯಂತಿಗಳಿಗೆ ಗ್ಯಾರಂಟಿ ಸಮಿತಿಯವರನ್ನ ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಎಚ್ಚರ ವಹಿಸಿ ಅಧಿಕಾರಿಗಳಿಗೆ ಸರಿಯಾದ ಮಾರ್ಗಸೂಚಿಗಳನ್ನು ತಿಳಿಸಬೇಕು ಎಂದು ತಿಳಿಸಿದರು.ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಅಕ್ಕಿ ನೀಡಬೇಕು. ಈಗಾಗಲೇ ಅಂಗಡಿ ಎದುರು ದರ ಪಟ್ಟಿ ಮತ್ತು ಸಾರ್ವಜನಿಕರ ಮಾರ್ಗಸೂಚಿ ನಾಮಫಲಕಗಳನ್ನ ಅಳವಡಿಸುವಂತೆ ತಿಳಿಸಿದ್ದರೂ ಸಹ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ. ಸಭೆಗೆ ಬಂದು ಕಾಟಾಚಾರದ ಮಾಹಿತಿಗಳನ್ನು ನೀಡುವುದಾದರೆ ಕೆಲಸ ಮಾಡಲು ನಿಮಗೆ ಸ್ವ ಇಚ್ಛೆ ಇಲ್ಲ. ಸರ್ಕಾರ ಜನರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಲು ಮುಂದಾಗಿದ್ದರೂ ಸಹ ಬೇಜವಾಬ್ದಾರಿ ವರ್ತನೆ ತೋರುತ್ತಿರುವುದು ಕಂಡು ಬಂದಿದೆ. ಮುಂದಿನ ಸಭೆ ಕರೆಯುವ ಒಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರ್ಗ ಸೂಚಿಗಳನ್ನು ಅಳವಡಿಸಿರಬೇಕು. ಜನರಿಗೆ ದೂರದ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಅಕ್ಕಿ ತರಲು ಸಾಧ್ಯವಾಗದ ಕೇಂದ್ರಗಳನ್ನು ಗುರುತಿಸಿ ಕೂಡಲೇ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುತ್ತೇವೆ ಎಂದು ತಿಳಿಸಿದರು.
ಕೆಎಸ್ಆರ್‌ಟಿಸಿ ಬಸ್‌ಗಳು ಶ್ರವಣಬೆಳಗೊಳದ ಕಡೆ ಸರಿಯಾದ ಸಮಯಕ್ಕೆ ಇಲ್ಲದೆ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯವರು ಕ್ರಮ ಜರುಗಿಸುವಂತೆ ತಿಳಿಸಲಾಯಿತು. ಗೃಹಲಕ್ಷ್ಮಿ ಯೋಜನೆ ಅಡಿ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಹಣ ಸಂದಾಯವಾಗಬೇಕು. ಮಹಿಳೆಯರಿಗೆ ನಮ್ಮ ಸರ್ಕಾರ 2000 ರು. ನೀಡುತ್ತಿರುವುದು ಮನೆಯ ಕುಟುಂಬದ ನಿರ್ವಹಣೆಗಾಗಿ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಗಾ ಇಟ್ಟು ಕೆಲಸ ಮಾಡಬೇಕು ಎಂದರು.ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ಜನಾರ್ಧನ್, ನವೀನ್ ಕುಮಾರ್, ನಾಗೇಶ್ ಮತ್ತಿತರರು ಇದ್ದರು.