ಸಾರಾಂಶ
- ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಮಾಜಿ ಸಿಎಂ - - -
ಕನ್ನಡಪ್ರಭ ವಾರ್ತೆ ದಾವಣಗೆರೆವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದ್ದು, ನಾವೆಲ್ಲಾ ಸಮಾಜ ಬಾಂಧವರು, ಗುರು-ವಿರಕ್ತರು-ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದು ಹಾವೇರಿ ಕ್ಷೇತ್ರ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಎಲ್ಲ ಗುರುಭಕ್ತರು ಒಂದಾದರೆ, ಈ ಸಮಾಜವನ್ನು ತಡೆಯುವವರೇ ಯಾರೂ ಇಲ್ಲ ಎಂಬುದನ್ನು ಅರಿಯೋಣ ಎಂದರು.ಬಹಳ ಸಂಕೀರ್ಣ ಕಾಲದಲ್ಲಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ನಮಗೆ ಬಹಳ ದೊಡ್ಡ ಇತಿಹಾಸವಿದೆ. ಅಷ್ಟೇ ಗಟ್ಟಿಯಾದ ಭವಿಷ್ಯವೂ ಇದೆ ಎನ್ನುತ್ತೇವೆ. ಚಿಂತನೆ ಮಾಡುವ ಕಾಲ ಇದಾಗಿದೆ. ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಕಾಲವೂ ಇದಲ್ಲ. ಈ ಬಗ್ಗೆ ವಿಚಾರ ಮಾಡಬೇಕಾಗಿದೆ. ನಮಗೆ ದೊಡ್ಡ ಇತಿಹಾಸದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಇದೆ. ನಮ್ಮದೇ ಆದ ಚಿಂತನೆಯಲ್ಲೂ ನಡೆಯುತ್ತೇವೆ ಎಂದು ತಿಳಿಸಿದರು.
ನ್ಯಾಯ, ನೀತಿ, ಧರ್ಮದ ಚೌಕಟ್ಟಿನಲ್ಲಿ ಸದಾ ನಮ್ಮ ಚಿಂತನೆ ಇರುತ್ತದೆ. ನಾವು ಯಾವ ಚೌಕಟ್ಟಿನಲ್ಲಿದ್ದೇವೋ ಅದೇ ಚೌಕಟ್ಟಿನಲ್ಲಿ ಜಗತ್ತು ಇಲ್ಲ. ನಾವು ಚೌಕಟ್ಟನ್ನೂ ಮೀರಿ ಚಿಂತನೆಯನ್ನು ಬದಲಾಯಿಸಬೇಕಾ ಅಥವಾ ಚಿಂತನೆಯ ಒಳಗೆ ಇರುವವರನ್ನು ಚೌಕಟ್ಟಿನ ಒಳಗೆ ತರಬೇಕಾ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಶ್ರೀ ರೇಣುಕಾಚಾರ್ಯರಿಂದ ಹಿಡಿದು ಬಸವೇಶ್ವರವರೆಗೆ ಜ್ಞಾನ ಮತ್ತು ಧ್ಯಾನದಿಂದ ಪಡೆದುಕೊಂಡಿರುವ ಚಿಂತನೆ ಒರೆಗೆ ಹಚ್ಚುವ ಕಾಲ ನಮಗೆ ಒದಗಿಬಂದಿದೆ ಎಂದು ಬೊಮ್ಮಾಯಿ ಹೇಳಿದರು.ಸಮಾಜ ಮುನ್ನಡೆಸುವ ಶಕ್ತಿ ವೀರಶೈವ ಲಿಂಗಾಯತರಿಗಿದೆ. ನಮ್ಮ ಚಿಂತನೆ ಮಾನವೀಯ ತಳಹದಿಯ ಮೇಲಿದೆ. ಗುರು ಮತ್ತು ವಿರಕ್ತರು ಬೇರೆ ಎನ್ನುವ ವಾದ ಬಿಟ್ಟು, ಇಡೀ ಮಾನವ ಕುಲಕ್ಕೆ ನೇತೃತ್ವ ಕೊಡುವ ಸಮಯ ಬಂದಿದೆ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ರೇಣುಕಾಚಾರ್ಯರು ಹೇಳಿದರು. ಅದೇ ರೀತಿ ದಯವೇ ಧರ್ಮದ ಮೂಲವಯ್ಯ ಅಂತಾ ಬಸವಣ್ಣ ಹೇಳಿದರು. ಇದರಲ್ಲಿ ವ್ಯತ್ಯಾಸ ಏನಿದೆ? ಮಹಾಪುರುಷರು ಒಂದೇ ರೀತಿಯಿಂದ ಚಿಂತನೆ ಮಾಡಿದಾಗ ನಮ್ಮಲ್ಲಿ ಭಿನ್ನತೆ ಏಕೆ ಎಂದು ಪ್ರಶ್ನಿಸಿದರು.
ಸಮಾಜದ ಮೇಲೆ ಧಾರ್ಮಿಕವಾಗಿ ಏನು ಪರಿಣಾಮ ಆಗುತ್ತಿದೆ ಎನ್ನುವ ಅರಿವು ನಮಗಿರಬೇಕು. ಅಂಗೈಯಲ್ಲಿ ಲಿಂಗ ಹಿಡಿದಾಗ ಎಲ್ಲವೂ ಒಂದಾಗುತ್ತದೆ. ಪರಮ ಪೂಜ್ಯರು, ಸಿದ್ಧಾಂತ ಶಿಖಾಮಣಿ, ಬಸವಾದಿ ಶರಣರು ಎಲ್ಲರೂ ಹೇಳುವುದು ಲಿಂಗದಲ್ಲಿ ಐಕ್ಯರಾಗುವುದು. ಯಾರೋ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಲು ಪ್ರಯತ್ನಸುತ್ತಿದ್ದಾರೆ. ಅಂತಹವರ ಬಗ್ಗೆ ನಾವು ಸದಾ ಜಾಗೃತರಾಗಿ ಇರಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚ್ಯವಾಗಿ ಎಚ್ಚರಿಸಿದರು.- - -
(ಕೋಟ್ಸ್) * ಪೀಠಾಧೀಶರು ಒಂದಾಗಿದ್ದು ಅಮೃತಘಳಿಗೆ ನಾಂದಿ ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ಮೆದುಳು ಮತ್ತು ಹೃದಯ ಒಂದಾದಾಗ ಅದೇ ಅಮೃತಘಳಿಗೆ. ಚಿಂತನೆ ಮತ್ತು ಭಾವನೆ ಒಂದಾದಾಗ ಅದೇ ಅಮೃತಘಳಿಗೆ. ಪಂಚಪೀಠಾಧೀಶರು ಇಂದು ಅಂತಹ ಅಮೃತಘಳಿಗೆಗೆ ನಾಂದಿ ಹಾಡಿದ್ದಾರೆ. ಗುರುಗಳು ಎಲ್ಲರೂ ಒಟ್ಟಾಗಿರುವುದು ನಮಗೆ ದೊಡ್ಡ ಸ್ಫೂರ್ತಿ, ಶಕ್ತಿಯಾಗಿದೆ. ನಾವೆಲ್ಲಾ ಒಂದಾಗಿ ನಡೆದರೆ ವೀರಶೈವ ಲಿಂಗಾಯತ ಅಷ್ಟೇ ಅಲ್ಲ, ಇಡೀ ಭಾರತ ನಮ್ಮ ಜೊತೆಗೆ ನಡೆಯುತ್ತದೆ.- ಬಸವರಾಜ ಬೊಮ್ಮಾಯಿ, ಹಾವೇರಿ ಸಂಸದ
- - -(ಟಾಪ್ ಕೋಟ್) ದುಡ್ಡೇ ದೊಡ್ಡಪ್ಪ ಅಂತಾ ಒಂದು ಕಾಲ ಇತ್ತು. ಮುಂಬರುವ ದಿನಗಳಲ್ಲಿ ದುಡಿಮೆಯೇ ದೊಡ್ಡಪ್ಪ ಆಗಲಿದೆ. ಯಾರಿಗೆ ದುಡಿಮೆ ಇದೆ. ಅಂತಹವರಿಗೆ ಬಡತನವಿಲ್ಲ. ದುಡಿಮೆ ಕಲಿಸುವ ಸಮಾಜವೆಂದರೆ ವೀರಶೈವ ಲಿಂಗಾಯತ ಸಮಾಜ. ಎಲ್ಲಿವರೆಗೂ ಮಾನವನಿಗೆ ದುಡಿಮೆ ಮಾಡುವ ವಿಚಾರ ಇರುತ್ತದೋ ಅಲ್ಲಿವರೆಗೂ ವೀರಶೈವ ಲಿಂಗಾಯತ ಸಮಾಜದ ಜೀವಂತವಾಗಿ ಇರುತ್ತದೆ. ಕಾಲಕ್ಕೆ ತಕ್ಕಂತೆ ಒಕ್ಕಟ್ಟಾಗಿ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತೇವೆ. ಸೂರ್ಯ-ಚಂದ್ರರು ಇರುವವರೆಗೂ ವೀರಶೈವ ಲಿಂಗಾಯತ ಶಕ್ತಿ ನಿರಂತರವಾಗಿ ಇರುತ್ತದೆ.
- ಬಸವರಾಜ ಬೊಮ್ಮಾಯಿ, ಸಿಎಂ- - -
(ಫೋಟೋ ಇವೆ)