ಹುಬ್ಬಳ್ಳಿ: ಕಲಿಕಾಲ ಸತ್ಯ ಕಾಲವಾಗಬೇಕಾದರೆ ಮನಸ್ಸು ಉತ್ತಮ ವಿಚಾರ ಅಳವಡಿಸಿಕೊಳ್ಳಬೇಕು. ಉತ್ತಮ ಮಾತು, ಉತ್ತಮ ಕೃತಿಗಳು ನಮ್ಮ ಕೈಗಳಿಂದಾಗಬೇಕು. ಮನಸ್ಸಿನಲ್ಲಿನ ದ್ವೇಷ ತೆಗೆದರೆ ಅದು ನಿರ್ಮಲ ದೇವಾಲಯವಾಗುತ್ತದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಅವರು ಶನಿವಾರ ಸಂಜೆ ಉಣಕಲ್ಲ ಕೆರೆ ಬಳಿಯ ಹೊಸಮಠ ಶ್ರೀ ಸಿದ್ದೇಶ್ವರ ನೂತನ ಶಿಲಾಮೂರ್ತಿಯ ದರ್ಶನ ಪಡೆದ ನಂತರ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ನಾವೆಲ್ಲರೂ ಸಾಮಾನ್ಯವಾಗಿ ಕಾಲ ಕೆಟ್ಟಿದೆ ಎನ್ನುತ್ತೇವೆ. ಕಾಲ ಕೆಟ್ಟಿಲ್ಲ, ನಮ್ಮ ತಲೆ ಕೆಟ್ಟಿದೆ. ಸತ್ಯಯುಗ ಮತ್ತು ಕಲಿಯುಗ ನಾವು ಮಾಡುವ ಕೆಲಸದ ಮೇಲೆ ಹೋಗುತ್ತದೆ. ಎದೆಯಲ್ಲಿ ಪ್ರೇಮ, ಬಾಯಲ್ಲಿ ಉತ್ತಮ ಮಾತು, ಕೈಯಲ್ಲಿ ಉದ್ಯೋಗ ಇದ್ದರೆ ಅದು ಸತ್ಯಯುಗ. ಬದಲಾವಣೆ ದೇವರಿಂದ ಆಗುವುದಲ್ಲ, ಮನಸ್ಸು ಬದಲಾದರೆ ಅದೇ ದೊಡ್ಡ ಸುಧಾರಣೆ. ಅದಕ್ಕಾಗಿಯೇ ಸಾಕಷ್ಟು ಸತ್ಸಂಗಗಳಾಗುತ್ತಿವೆ. ಸತ್ಸಂಗಗಳು ಮನಸ್ಸಿನಲ್ಲಿರುವ ಕೆಟ್ಟವಿಚಾರಗಳನ್ನು ಹೊರ ಹಾಕಲು ಮಾಡಲಾಗುತ್ತದೆ ಎಂದರು.

ಬದಲಾವಣೆ, ಸುಧಾರಣೆ ಹೊರಗಡೆ ಕಾಣುವುದಲ್ಲ. ನಮ್ಮ ಒಳಗಡೆ ನಾವು ಕಂಡುಕೊಳ್ಳಬೇಕು. ಮನುಷ್ಯನ ಮನಸ್ಸು ಸುಧಾರಣೆ ಕಂಡರೆ ಎಲ್ಲವೂ ಪರಿವರ್ತನೆಯಾಗಲಿದೆ. ಇಲ್ಲಿ ನಾವು ಎಲ್ಲವನ್ನು ಒಪ್ಪಿಕೊಂಡು ಹೋಗಬೇಕು. ಮನಸ್ಸು ಸರಿ ಇದ್ದಾಗ ಮನೆ ಸರಿಯಾಗಿರುತ್ತದೆ. ಮನಸ್ಸು ಕೆಟ್ಟಿದ್ದರೆ ವ್ಯವಸ್ಥೆ ಕೆಟ್ಟದಾಗಿರುತ್ತದೆ ಎಂದರು.

ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಈ ಭಾಗದಲ್ಲಿ ಉಣಕಲ್ಲ ಶ್ರೀ ಸಿದ್ಧೇಶ್ವರ ಹೊಸಮಠವು ಧಾರ್ಮಿಕ ಜಾಗೃತಿ ಕೇಂದ್ರವಾಗಿದೆ. ಕೊಪ್ಪಳದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ದಾಸೋಹ, ಶಿಕ್ಷಣದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ. ಅವರ ಧ್ವನಿಯಲ್ಲಿ ದೈವತ್ವವಿದೆ. ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಹತ್ತರಿಂದ ಇಪ್ಪತ್ತು ಲಕ್ಷ ಜನ ಸೇರುತ್ತಾರೆ ಎಂದರೆ ಅದು ಪವಾಡವೇ ಸರಿ ಎಂದರು.


ಉಣಕಲ್ಲ ಸಿದ್ಧೇಶ್ವರ ಸ್ವಾಮೀಜಿ ಹೊಸಮಠ ಟ್ರಸ್ಟ್‌ ಅಧ್ಯಕ್ಷ ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಪ್ರಮುಖರಾದ ಸಿದ್ದನಗೌಡ ಕಾಮಧೇನು, ಮಲ್ಲಿಕಾರ್ಜುನ ಸಾವಕಾರ, ಚನ್ನು ಪಾಟೀಲ, ಡಾ. ವಿಶ್ವನಾಥ ಕೊರವಿ, ಪರಶುರಾಮ ಹೊಂಬಳ, ಅಜ್ಜಪ್ಪ ಹೊರಕೇರಿ, ರಾಮಣ್ಣ ಪದ್ಮಣ್ಣವರ ಸೇರಿದಂತೆ ಹಲವರಿದ್ದರು.