ರಾಜ್ಯ ಸರ್ಕಾರ ಕನ್ನಡಪರ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಾಗರ: ರಾಜ್ಯ ಸರ್ಕಾರ ಕನ್ನಡಪರ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಾಣಿಚೆನ್ನಮ್ಮಾಜಿ ವೃತ್ತದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ನಾಗರೀಕ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡುನುಡಿ ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನ ಪ್ರಯತ್ನ ನಡೆಸಬೇಕು. ಕನ್ನಡ ಭಾಷೆ ಉಳಿದರೆ ಕನ್ನಡ ನಾಡಿನ ಅಸ್ಮಿತೆ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಲಾಗಿದೆ. ಕನ್ನಡಿಗರು ಸ್ವಾಭಿಮಾನಿಗಳಾಗಿದ್ದು ನಾಡುನುಡಿ ವಿಷಯ ಬಂದಾಗ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಸಂಸತದ ಸಂಗತಿ ಎಂದರು.

ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕನ್ನಡ ಭಾಷೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು, ಆಟೋ ಚಾಲಕರ ಪಾತ್ರ ಮಹತ್ವದ್ದಾಗಿದೆ. ಸಾಗರದಲ್ಲಿ ಕನ್ನಡ ನಾಡನುಡಿ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಚಟುವಟಿಕೆಗಳು ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಸುಮಾರು ೧೦ ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತದೆ. ಕೆಳದಿ ರಾಣಿ ಚೆನ್ನಮ್ಮಾಜಿ ಹೆಸರು ಶಾಶ್ವತವಾಗಿ ಉಳಿಸಲು ಈ ವೃತ್ತವನ್ನು ಅಭಿವೃದ್ದಿಪಡಿಸಿ ರಾಣಿ ಚೆನ್ನಮ್ಮಾಜಿ ಪುತ್ಥಳಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಬಿ.ಟಾಕಪ್ಪ, ಸೈಯದ್ ಇಕ್ಬಾಲ್ ಸಾಬ್, ಮಾರುತಿ, ಡಾ.ವಿಕ್ರಮ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಸಾಗರ್, ಅನ್ವರ್ ಭಾಷಾ, ಶಂಕರ ಅಳ್ವಿಕೋಡಿ, ಮಧುಮಾಲತಿ, ಲಲಿತಮ್ಮ, ಕಲಸೆ ಚಂದ್ರಪ್ಪ, ಹೊಳೆಯಪ್ಪ, ಎಲ್.ಚಂದ್ರಪ್ಪ, ಪ್ರೇಮ್ ಸಿಂಗ್, ತಾರಾಮೂರ್ತಿ, ಲಕ್ಷ್ಮಣ ಸಾಗರ್, ಮದನ್ ಸಿಂಗ್, ಗಣಪತಿ ಮಂಡಗಳಲೆ, ಕೇಶವ ಕಾಮತ್ ಇದ್ದರು.