ಸಾರಾಂಶ
ಶಿಕಾರಿಪುರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ದೈನಿಂದಿನ ಬದುಕಿನಲ್ಲಿ ಸಮಸ್ಯೆಯಿಲ್ಲದ ನೆಮ್ಮದಿಯ ಜೀವನಕ್ಕೆ ಪ್ರತಿಯೊಬ್ಬರಿಗೂ ಕಾನೂನಿನ ಪ್ರಾಥಮಿಕ ಜ್ಞಾನ ಅಗತ್ಯವಾಗಿದ್ದು, ಕಾನೂನು ಎಂದರೆ ಕೇವಲ ಶಿಕ್ಷೆ ವಿಧಿಸುವುದು ಎಂಬ ತಪ್ಪುಗ್ರಹಿಕೆಯನ್ನು ಹೋಗಲಾಡಿಸಬೇಕಾಗಿದೆ ಎಂದು ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಯಶವಂತ ಕುಮಾರ್ ತಿಳಿಸಿದರು.ಗುರುವಾರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕು. ಆ ಮೂಲಕ ಕಾನೂನು ಅರಿತಾಗ ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು. ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ. ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಬದುಕಲು ಕಾನೂನಿನ ಬಗ್ಗೆ ಪ್ರಾಥಮಿಕ ಜ್ಞಾನ ಅಗತ್ಯವಾಗಿದೆ ಎಂದು ತಿಳಿಸಿದರು.ಮುಖ್ಯ ಅತಿಥಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಆನಂದಪ್ಪ ಎಂ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಸೇವಾ ಕೇಂದ್ರದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವೀಂದ್ರ ಕೆ.ಸಿ ಮಾತನಾಡಿ,ವಿದ್ಯಾರ್ಥಿಗಳು ಕಾನೂನು,ರಸ್ತೆ ಸುರಕ್ಷತೆ ಮುಂತಾದ ನಿಯಮಗಳ ಅರಿವು ಹೊಂದುವ ಅಗತ್ಯವಿದೆ ಎಂದರು.ವೇದಿಕೆಯಲ್ಲಿ ಐಕ್ಯೂಎಸಿ ವಿಭಾಗ ಮುಖ್ಯಸ್ಥ ಡಾ.ಪರಶುರಾಮ ಟಿ.ಆರ್,ಪ್ರಾಧ್ಯಾಪಕ ಕೋಟೋಜಿರಾವ್ ಆರ್ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು.ಪೂರ್ಣಿಮಾ ನಾಯ್ಕ ಸ್ವಾಗತಿಸಿ, ಕು.ವ್ರತಾ ನಿರೂಪಿಸಿ,ಉಪನ್ಯಾಸಕಿ ನಂದಿನಿ ವಂದಿಸಿದರು.