ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಪ್ಪ
ಸುಧೀರ್ಘ ಕಾಲದಿಂದ ಪಪಂಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಕ್ಷೇತ್ರದ ಶಾಸಕರಿಗೆ ಆಗಿಲ್ಲ. ೭ ವರ್ಷ ಕಳೆದರೂ ಬಾಳೆಹೊನ್ನೂರಿನ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಹಿನ್ನೆಡೆ ಯುಂಟಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಶಾಸಕರ ವಿರುದ್ಧ ಕಿಡಿಕಾರಿದರು.ಗ್ರಾಮಾಂತರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಕೆರೆ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಲೇಔಟ್‌ನ ಕಲ್ಮಶ ನೀರು ಕೆರೆಗೆ ಸೇರದಂತೆ ಲೇಔಟ್ ನಿರ್ಮಾಣ ತಡೆಹಿಡಿಯಬೇಕೆಂದು ಆಗ್ರಹಿಸಿ ಕೊಪ್ಪ ಮಂಡಳ ಬಿಜೆಪಿಯಿಂದ ಬುಧವಾರ ಪಪಂ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕೊಪ್ಪ ಪಟ್ಟಣಿಗರು ಮಾತ್ರ ಹಿರಿಕೆರೆ ನೀರು ಕುಡಿಯುವುದಿಲ್ಲ. ಪಟ್ಟಣಕ್ಕೆ ವಿವಿಧ ಕೆಲಸ ಗಳಿಗಾಗಿ ಶೃಂಗೇರಿ, ನ.ರಾ. ಪುರ, ತೀರ್ಥಹಳ್ಳಿ ಮುಂತಾದ ಭಾಗಗಳಿಂದ ಕೊಪ್ಪಕ್ಕೆ ಬರುವ ಇತರರು ಈ ಕಲ್ಮಶ ನೀರನ್ನೇ ಕುಡಿಯುವ ಸಂಗತಿ ಬಂದಿದೆ. ಜನಸಾಮಾನ್ಯರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಲೇಔಟ್ ಕಾಮಗಾರಿ ಸ್ಥಗಿತಗೊಳಿಸಬೇಕು. ಮುಂದಿನ ೧೦ ದಿನದಲ್ಲಿ ಕೆಲಸ ಸ್ಥಗಿತಗೊಳಿಸದೆ ಇದ್ದಲ್ಲಿ ಕೊಪ್ಪ ಬಂದ್‌ಗೆ ಕರೆಕೊಡುತ್ತೇವೆ. ಸ್ಥಳದಲ್ಲಿದ್ದ ತಹಸೀಲ್ದಾರ್ ಮತ್ತು ಮುಖ್ಯಾಧಿಕಾರಿ ಚಂದ್ರಕಾಂತ್‌ನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ಮಾತನಾಡಿ ಲೇಔಟ್ ನಿರ್ಮಾಣವಾಗುತ್ತಿರುವ ಜಾಗಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಈ ಭಾಗದಲ್ಲಿ ಪ್ರಕೃತಿ ಲೇಔಟ್ ಆದಾಗಲೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ಮಾತನಾಡಿ ಕಳೆದೆರಡು ತಿಂಗಳಿನಿಂದ ನಾಗರಿಕರು ಪ್ರತಿಭಟನೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಚುನಾವಣೆ ನೀತಿಸಂಹಿತೆಯಿದ್ದು ಅದು ಮುಕ್ತಾಯ ವಾಗಿರುವುದರಿಂದ ಈಗ ಪ್ರತಿಭಟನೆ ಮಾಡುತ್ತಿದ್ದೇವೆ. ಸೂಕ್ತ ಕ್ರಮ ವಹಿಸದೆ ಇದ್ದಲ್ಲಿ ಪ್ರತಿಭಟನೆ ಮುಂದು ವರೆಯುತ್ತದೆ ಎಂದ ಅವರು ೯೦ರ ದಶಕದಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದಾಗ ತಡೆಹಿಡಿಯ ಲಾಗಿತ್ತು. ಬಿಜೆಪಿ ಆಡಳಿತ ರಾಜ್ಯದಲ್ಲಿ ಕೊನೆಯಾದಾಗ ಮತ್ತೆ ಲೇಔಟ್ ನಿರ್ಮಾಣ ಕೈಗೊಂಡಿದ್ದಾರೆ. ಲೇಔಟ್ ಯಾರು ಮಾಡುತ್ತಿದ್ದಾರೆ ಎಂದು ನಮಗೆ ಮುಖ್ಯವಲ್ಲ. ಜನರಿಗೆ ಕುಡಿಯುವ ನೀರಿಗೆ ತೊಂದರೆ ಯಾಗುತ್ತಿದೆ. ಶಾಸಕರಿಗೆ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಈಗಾಗಲೇ ಲೇಔಟ್ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಹೇಳಿದ್ದಲ್ಲಿ ಲೇಔಟ್ ಕಾಮಗಾರಿ ನಿಂತುಹೋಗುತ್ತದೆ. ಆದರೆ ಶಾಸಕರು ಇದಕ್ಕೆ ಮುಂದಾಗುತ್ತಿಲ್ಲ. ಇದರಿಂದ ಮುಂದಾಗುವ ಅನಾಹುತಗಳಿಗೆ ಶಾಸಕರೇ ನೇರವಾಗಿ ಹೊಣೆ ಯಾಗುತ್ತಾರೆ. ಅದಕ್ಕೆ ಬೆಲೆಯನ್ನು ಶಾಸಕರೇ ತೆರಬೇಕಾಗುತ್ತದೆ ಎಂದರು.
ಮುಖಂಡರಾದ ಡಾ. ಜಿ.ಎಸ್. ಮಹಾಬಲರಾವ್, ಎಚ್.ಆರ್. ಜಗದೀಶ್ ದಿವಾಕರ್ ಭಟ್, ಪದ್ಮಾವತಿ ರಮೇಶ್, ಮುಂತಾದವರು ಮಾತನಾಡಿದರು. ಕೊಪ್ಪ ಬಿಜೆಪಿಯಿಂದ ಲೇಔಟ್ ನಿರ್ಮಾಣ ಸ್ಥಗಿತ ಗೊಳಿಸುವಂತೆ ಪಪಂ ಕಚೇರಿ ಎದುರು ತಹಸೀಲ್ದಾರ್‌ರರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನಾಕಾರರು ಶಾಸಕರ ಕಚೇರಿಗೆ ತೆರಳಿ ಶಾಸಕರ ಆಪ್ತ ಸಹಾಯಕರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು. ಪಪಂ ಸದಸ್ಯರಾದ ಇದ್ದೀನಬ್ಬ, ಗಾಯತ್ರಿ ಶೆಟ್ಟಿ, ಗಾಯತ್ರಿ ಭಟ್, ಸುಜಾತ, ರೇಖಾ ಪ್ರಕಾಶ್, ಬಿಜೆಪಿ ಪಕ್ಷದ ಕಾರ್ಯಕರ್ತರು, ನಾಗರಿಕರು ಇದ್ದರು.