ಸಂಘಟನೆ ಗಟ್ಟಿಯಾದರೆ ಸಂವಿಧಾನ ಗಟ್ಟಿ: ಶಾಸಕ‌ ರಾಘವೇಂದ್ರ ಹಿಟ್ನಾಳ

| Published : Apr 15 2024, 01:18 AM IST

ಸಾರಾಂಶ

ಸಂವಿಧಾನ ಬದಲಾವಣೆ ಮಾಡೋರನ್ನೇ ಈ ಬಾರಿಯ ಚುನಾವಣೆಯಲ್ಲಿ ಬದಲಾಯಿಸುವ ಕಾಲ ಕೂಡಿಬಂದಿದೆ.

- ಸಂವಿಧಾನ ಬದಲಾವಣೆ ಮಾಡೋರನ್ನೆ ಬದಲಾಯಿಸಿ

- ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಕೈ ಶಾಸಕ

- ವಿವಿಧ ಗ್ರಾಮದಲ್ಲಿ ಕೈ ಅಭ್ಯರ್ಥಿ ಪರ ಭರ್ಜರಿ ಮತಬೇಟೆಕನ್ನಡಪ್ರಭ ವಾರ್ತೆ ಕೊಪ್ಪಳದೇಶದಲ್ಲಿ ಸಂಘಟನೆ ಗಟ್ಟಿಯಾದಂತೆಲ್ಲ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಗಟ್ಟಿಯಾಗಲಿದೆ. ಸಂವಿಧಾನ ಬದಲಾವಣೆ ಮಾಡೋರನ್ನೇ ಈ ಬಾರಿಯ ಚುನಾವಣೆಯಲ್ಲಿ ಬದಲಾಯಿಸುವ ಕಾಲ ಕೂಡಿಬಂದಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರವಾಗಿ ತಾಲೂಕಿನ ಬಂಡಿ ಹರ್ಲಾಪುರ, ಶಿವುಪರ, ಅಗಳಕೇರಾ, ಹುಲಿಗಿ, ಮುನಿರಾಬಾದ್, ಹೊಸಳ್ಳಿ ಮತ್ತು ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಮತಯಾಚಿಸಿ ಅವರು ಮಾತನಾಡಿದರು.

ಸಂವಿಧಾನ ರಕ್ಷಣೆಗಾಗಿ ಇಂಡಿಯಾ ಮೈತ್ರಿಕೂಟ ಹೋರಾಟ ಮಾಡುತ್ತಿದೆ. ಮತ್ತೊಂದೆಡೆ ಬದಲಾವಣೆ ಮುಖೇನ ಸಂವಿಧಾನ ಹಾಳು ಮಾಡಲು ಹವಣಿಸುತ್ತಿದ್ದಾರೆ. ಸಂವಿಧಾನ ರಕ್ಷಣೆಯೇ ಇಂಡಿಯಾ ಕೂಟದ ಮುಖ್ಯಗುರಿಯಾಗಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ಒಕ್ಕಲೆಬ್ಬಿಸುವ ಬಿಜೆಪಿಗರಿಗೆ ತಕ್ಕಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಮತದಾರರು ನಮ್ಮ ಜತೆ ಕೈಜೋಡಿಸಬೇಕಿದೆ ಎಂದರು.

ಗ್ಯಾರಂಟಿ ಬಗ್ಗೆ ಅಪಹಾಸ್ಯ ಮಾಡಿದ ಪ್ರಧಾನ ಮಂತ್ರಿಯವರೇ ಇಂದು ತಮ್ಮ ಪ್ರಣಾಳಿಕೆಯಲ್ಲಿ ಕೆಲವೊಂದು ಗ್ಯಾರಂಟಿ ಘೋಷಿಸಿದ್ದಾರೆ. ಗ್ಯಾರಂಟಿಯಿಂದ ಆರ್ಥಿಕತೆಗೆ ಧಕ್ಕೆಯಾಗುವುದಿಲ್ಲವೇ? ಕಾರ್ಪೋರೆಟ್ ಕಂಪನಿ ಪರವಾಗಿರುವ ಮೋದಿಯವರಿಗೆ ಬಡಜನರ ಕಷ್ಟ ಅರ್ಥವಾಗುವುದಿಲ್ಲ. ಮೋದಿ ಆಡಳಿತದಿಂದ ದೇಶ ದಿವಾಳಿಯಾಗಿದೆ ಎಂದರು.

ದೇಶದ ಜನರ ಮನಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಹೀಗಾಗಿಯೇ ಪ್ರಧಾನಿ ಮೋದಿ ಭಯಭೀತರಾಗಿದ್ದು, ಹಿಂದುಳಿದ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ನೀಡಿದ ಆಶ್ವಾಸನೆಯನ್ನು ಇನ್ನೂ ಈಡೇರಿಸದ ಮೋದಿ ದೇಶ ಅಭಿವೃದ್ಧಿ ಮಾಡೋದು ಯಾವಾಗ‌? ಮೋದಿಯವರ ಸರ್ವಾಧಿಕಾರ ಆಡಳಿತದಿಂದ ಬಿಜೆಪಿಯ ಅನೇಕ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ನಂತರ ಅನೇಕ ಸಮಾಜಮುಖಿ ಕೆಲಸ ಮತ್ತು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಬಡಜನರ ಬೆನ್ನಿಗೆ ನಿಂತಿದೆ. ಕೇಂದ್ರದಲ್ಲಿ ಮತ್ತೇ ನಮ್ಮ‌ ಸರ್ಕಾರ ಅಸ್ತಿತ್ವಕ್ಕೆ ಬಂದರೇ ಐದು ಗ್ಯಾರಂಟಿ ಜಾರಿಗೊಳಿಸಿ, ಬಡತನ ನಿರ್ಮೂಲನೆ ಮಾಡುತ್ತೇವೆ ಎಂದರು.ಬಾಕ್ಸ್

ಭವ್ಯ ಸ್ವಾಗತ:

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಮತಯಾಚನೆ ತೆರಳಿದ ವೇಳೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಬಂಡಿ ಹರ್ಲಾಪುರ, ಹುಲಿಗಿ, ಹೊಸಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಕಾರ್ಯಕರ್ತರು ಹೂಮಳೆಗೈಯುವ ಮೂಲಕ ಭರ್ಜರಿಯಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ, ಕೃಷ್ಣರೆಡ್ಡಿ ಗಲಭಿ, ವಿರೂಪಾಕ್ಷಯ್ಯ ಗದುಗಿನಮಠ, ವಿರುಪಣ್ಣ ನವೋದಯ, ವೆಂಕಟೇಶ ಕಂಪಸಾಗರ, ಗಾಳೆಪ್ಪ ಪೂಜಾರ್, ವಿಶ್ವನಾಥ ರಾಜು, ಈರಣ್ಣ ಗಾಣಿಗೇರ, ಯಂಕಪ್ಪ ಹೊಸಳ್ಳಿ, ಬಾಲಚಂದ್ರ ಮುನಿರಬಾದ್, ಕೆ.ಎಂ. ಸೈಯದ್, ತೋಟಪ್ಪ ಕಾಮನೂರು, ಪಾಲಾಕ್ಷಪ್ಪ ಗುಂಗಾಡಿ, ಬಸವರಾಜ್ ಬೋವಿ, ಜ್ಯೋತಿ ಗೊಂಡಬಾಳ, ಈರಣ್ಣ ಹುಲಿಗಿ, ಪಂಪಣ್ಣ ಪೂಜಾರ್, ಹನುಮೇಶ್ ಹೊಸಳ್ಳಿ, ಮಲ್ಲು ಪೂಜಾರ, ರೇಷ್ಮಾ ಖಾಜಾವಲಿ, ಕಾವೇರಿ ರ್‍ಯಾಗಿ, ಪದ್ಮಾವತಿ ಕಂಬಳಿ, ಸವಿತಾ ಗೊರಂಟ್ಲಿ, ಪರಶುರಾಮ್ ಕೆರೆಹಳ್ಳಿ, ನಾಗರಾಜ್ ಪಟವಾರಿ, ಅಶೋಕ ಹಿಟ್ನಾಳ ಸೇರಿದಂತೆ ಹಲವರಿದ್ದರು.