ಸಾರಾಂಶ
ಬೆಂಗಳೂರು : ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಆಗಮಿಸಿದ್ದ ರೈತರೊಬ್ಬರನ್ನು ಒಳಗೆ ಬಿಡದ ಘಟನೆ ಬೆನ್ನಲ್ಲೇ ಇದೀಗ ಬಿಬಿಎಂಪಿಯು ರಾಜಧಾನಿ ಬೆಂಗಳೂರಿನ ಎಲ್ಲಾ ಮಾಲ್, ಸೂಪರ್ ಮಾರ್ಕೇಟ್ ಸೇರಿದಂತೆ ಅಂಗಡಿಗಳಿಗೆ ಮಾರ್ಗಸೂಚಿ ರಚಿಸಿದೆ. ಮುಂದಿನ ದಿನಗಳಲ್ಲಿ ಪಂಚೆ ಮಾದರಿಯ ಘಟನೆ ಮರುಕಳಿಸದಂತೆ ಕ್ರಮಕ್ಕೆ ಮುಂದಾಗಿದೆ.
ಕಳೆದ ಜು.16ರಂದು ಹಾವೇರಿ ಮೂಲದ ಪಂಚೆ ಧರಿಸಿ ಬಂದಿದ್ದ ರೈತರೊಬ್ಬರಿಗೆ ಮಾಗಡಿ ರಸ್ತೆಯ ‘ಜಿ.ಟಿ. ವರ್ಲ್ಡ್ ಮಾಲ್’ನಲ್ಲಿ ಸಿನಿಮಾ ನೋಡಲು ಬಿಡದೇ ಅಪಮಾನಿಸಿದ ಘಟನೆ ನಡೆದಿತ್ತು. ಈ ಬಗ್ಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ವಿಧಾನಸಭೆಯಲ್ಲೂ ಪಕ್ಷಾತೀತವಾಗಿ ಸದಸ್ಯರು ಖಂಡಿಸಿ ಮಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿ ಕಾರಣ ನೀಡಿ ಮಾಲ್ ಸೀಜ್ ಮಾಡಿತ್ತು.
ಘಟನೆಯ ಹಿನ್ನೆಲೆಯಲ್ಲಿ ಮಾಲ್‌ಗಳಿಗೆ ಮಾರ್ಗಸೂಚಿ ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ವಿಧಾನಸಭೆಯಲ್ಲಿ ಹೇಳಿದ್ದರು. ಅದರಂತೆ ಇದೀಗ ಬಿಬಿಎಂಪಿಯು ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ರಚಿಸಿ ಆದೇಶಿಸಿದೆ.
ತಾರತಮ್ಯ ಸಲ್ಲದು
ಬಿಬಿಎಂಪಿಯ ಮಾರ್ಗಸೂಚಿಯಲ್ಲಿ ಭಾರತೀಯ ಸಂವಿಧಾನದ ವಿಧಿ 14, 19, 21 ಹಾಗೂ 25 ಅನ್ನು ಗಣನೆಗೆ ತೆಗೆದುಕೊಂಡು ಮತ್ತು ಆರ್ಟಿಕಲ್ 15(1), (2)ರಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸುವ ಮತ್ತು ಸಾಮಾಜಿಕ ಸಮಾನತೆಯ ಹಕ್ಕನ್ನು ಖಾತ್ರಿ ಪಡಿಸಲಾಗಿದೆ. ಅದು ಜಾತಿ, ಧರ್ಮ, ಭಾಷೆ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ ಎಂದು ಬಿಬಿಎಂಪಿ ತಿಳಿಸಲಾಗಿದೆ.ಸಿಬ್ಬಂದಿ ಸೂಕ್ತ ಮಾರ್ಗದರ್ಶನ ಮಾಡಿ
ನಗರದ ಮಾಲ್, ಸೂಪರ್ ಮಾರ್ಕೇಟ್ ಹಾಗೂ ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಧರಿಸಿರುವ ಉಡುಪಿನ ಆಧಾರದ ಮೇಲೆ ಪ್ರವೇಶ ನಿರಾಕರಿಸದಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಸೂಕ್ತ ನಿರ್ದೇಶನ ಮತ್ತು ಮಾರ್ಗದರ್ಶನ ಮಾಡಬೇಕೆಂದು ಬಿಬಿಎಂಪಿ ತಿಳಿಸಿದೆ.ಉದ್ದಿಮೆ ಪರವಾನಗಿ ರದ್ದು
ಉಡುಪು ಆಧಾರದಲ್ಲಿ ಪ್ರವೇಶ ನಿರಾಸಕರಿಸಿದ ಘಟನೆ ಮತ್ತೆ ತಮ್ಮ ಮಾಲ್, ಸೂಪರ್ ಮಾರ್ಕೇಟ್ ಹಾಗೂ ಅಂಗಡಿಗಳನ್ನು ಮರುಕಳಿಸದಂತೆ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಒಂದು ವೇಳೆ ಘಟನೆ ಮರುಕಳಿಸಿದರೆ, ಸಂವಿಧಾನ ಹಕ್ಕು ಹಾಗೂ ಮಾನವ ಹಕ್ಕು ಉಲ್ಲಂಘಿಸಿದ ಅಪರಾಧ ಎಂದು ಪರಿಗಣಿಸಿ ಉದ್ದಿಮೆ ಪರವಾನಗಿ ರದ್ದುಗೊಳಿಸಲಾಗುವುದು. ಜತೆಗೆ, ತಮ್ಮ ಉದ್ದಿಮೆಯನ್ನು ನಿರ್ಧಾಕ್ಷಿಣ್ಯವಾಗಿ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದೆ.ಐಪಿಸಿ ಅಡಿ ಕ್ರಮ
ಅಷ್ಟೇ ಅಲ್ಲದೇ, ಮಾಲ್, ಸೂಪರ್ ಮಾರ್ಕೇಟ್ ಹಾಗೂ ಅಂಗಡಿ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಿರುವ ಮಾರ್ಗಸೂಚಿ ಆದೇಶದಲ್ಲಿ ಉಲ್ಲಖಿಸಲಾಗಿದೆ.