ಅಂಬೇಡ್ಕರ್ ಭವನಕ್ಕೆ ಜಾಗ ನಿರ್ಧರಿಸಿದರೆ ಶೀಘ್ರವೇ ಭವನ: ಎಸ್ಸೆಸ್ಸೆಂ

| Published : Jul 29 2024, 12:55 AM IST

ಸಾರಾಂಶ

ಎರಡು ದಶಕದಿಂದಲೂ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣವು ಜಿಲ್ಲಾ ಕೇಂದ್ರದ ಯಾವ ಭಾಗದಲ್ಲಿ ಆಗಬೇಕೆಂಬ ಬಗ್ಗೆ ಸಮಾಜದ ಜನರು ಅಂತಿಮ ನಿರ್ಧಾರ ಕೈಗೊಂಡರೆ ಅದೇ ಜಾಗದಲ್ಲಿ ಶೀಘ್ರವೇ ಭವನ ನಿರ್ಮಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಮುದಾಯ ಭವನ ನಿರ್ಮಾಣಕ್ಕೆ ವಿಶೇಷ ಸಭೆಗೆ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಎರಡು ದಶಕದಿಂದಲೂ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣವು ಜಿಲ್ಲಾ ಕೇಂದ್ರದ ಯಾವ ಭಾಗದಲ್ಲಿ ಆಗಬೇಕೆಂಬ ಬಗ್ಗೆ ಸಮಾಜದ ಜನರು ಅಂತಿಮ ನಿರ್ಧಾರ ಕೈಗೊಂಡರೆ ಅದೇ ಜಾಗದಲ್ಲಿ ಶೀಘ್ರವೇ ಭವನ ನಿರ್ಮಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ಹೇಳಿದರು.

ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ- ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಭವನ 2003ರಲ್ಲೇ ಆಗಬೇಕಾಗಿತ್ತು. ಆದರೆ, ಜಾಗ ಅಂತಿಮಗೊಳಿಸದ ಕಾರಣಕ್ಕೆ ನನೆಗುದಿಗೆ ಬಿದ್ದಿದೆ. ಒಬ್ಬರು ಪಿ.ಬಿ. ರಸ್ತೆಯಲ್ಲೇ ಭವನ ಆಗಬೇಕೆಂದರೆ, ಮತ್ತೊಬ್ಬರು ಹಳೇ ಭಾಗದಲ್ಲಿ ಆಗಬೇಕೆನ್ನುತ್ತಾರೆ. ಮಗದೊಬ್ಬರು ಇನ್ನೊಂದು ಕಡೆ ಆಗಬೇಕೆನ್ನುತ್ತಾರೆ. ಮೊದಲು ಸ್ಥಳ ಯಾವುದು ಎಂಬುದನ್ನು ಸಮಾಜದ ಜನರು ಅಂತಿಮಗೊಳಿಸಿ, ನಿರ್ಧರಿಸಲಿ. ಆ ನಂತರ ಭವನ ನಿರ್ಮಾಣವೂ ಶೀಘ್ರವೇ ಆಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರಿಗೆ ಸರ್ಕ್ಯೂಟ್ ಹೌಸ್ ಪಕ್ಕದ ಜಾಗದಲ್ಲಿ ಸರ್ವೇ ಮಾಡಲು ಹೇಳಿದ್ದೆ. ಆದರೆ, ಡಿಸಿಸಿ ಬ್ಯಾಂಕ್‌ನವರು ಅದು ತಮ್ಮ ಜಾಗವೆಂದು ಹೇಳಿದ್ದಾರೆ. ಈಗಾಗಲೇ ಜಾಗದ ಸರ್ವೇ ಕಾರ್ಯ ಕೈಗೊಂಡಿರುವುದಾಗಿ ತಹಸೀಲ್ದಾರರು ಹೇಳಿದ್ದಾರೆ. ನಂತರ ನನ್ನ ಮೇಲೆ ಗೂಬೆ ಕೂಡಿಸಬೇಡಿ. ಮೊದಲು ಎಲ್ಲರೂ ಒಂದು ಕಡೆ ಕುಳಿತು, ಜಾಗದ ಬಗ್ಗೆ ಚರ್ಚಿಸಿ, ಅಂತಿಮ ನಿರ್ಧಾರ ಮಾಡಿ. ಜಾಗ ನಿರ್ಧರಿಸಿಕೊಂಡು ಬಂದರೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಸಹ ಇಲ್ಲೇ ಇದ್ದಾರೆ. ನಾ‍ಳೆಯೇ ಮಹದೇವಪ್ಪ ಅವರಿಂದ ಗುದ್ದಲಿ ಪೂಜೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಿದ್ದಾಗ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಕೆಲವು ಕಾಮಗಾರಿಗಳಿಗೆ ಅರೆಬರೆ ಅನುದಾನ ಬಂದಿದೆ. ಹೀಗೆ ಅಪೂರ್ಣವಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗ ಸಾಕಷ್ಟು ಅನುದಾನದ ಅಗತ್ಯವಿದೆ. ಹಾಗಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ ವಿಶೇಷ ಸಭೆ ಕರೆಯಲು ಸಚಿವ ಡಾ.ಮಹದೇವಪ್ಪ ಅವರಿಗೆ ಎಸ್‌.ಎಸ್‌.ಎಂ. ಮನವಿ ಮಾಡಿದರು.

- - -

ಬಾಕ್ಸ್‌ * ಛಲವಾದಿಗಳು ಶೈಕ್ಷಣಿಕ ಸಾಧನೆ ಮೆರೆಯಲಿ: ಸಚಿವ ಕನ್ನಡಪ್ರಭ ವಾರ್ತೆ, ದಾವಣಗೆರೆ, ಜು.28ಛಲವಾದಿ ಬಾಂಧವರು ಕೇವಲ ಹಲಗೆ ಬಡೆಯುವುದರಲ್ಲೇ ಇರದೇ, ಸ್ವಲ್ಪ ಮುಂದೆ ಬರಬೇಕು. ನಿಮ್ಮ ಸಮುದಾಯದ ಮಕ್ಕಳಿಗೆ, ಯುವಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಛಲವಾದಿ ಅಂದರೆ ಬಹಳ ಬುದ್ಧಿವಂತರು ಎಂದರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು. ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಮಲ ಹೊರುವ ಪದ್ಧತಿಯನ್ನು ಹಿಂದೆಯೇ ನಿಷೇಧ ಮಾಡಲಾಗಿದೆ. ಶೈಕ್ಷಣಿಕವಾಗಿಯೂ ಸಮಾಜಗಳು ಮುಂದೆ ಬರಬೇಕು ಎಂದರು.

ನಿಮ್ಮದೇ ಸಮುದಾಯದ ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರಂತೆ ಉನ್ನತ ಸ್ಥಾನಮಾನ, ಹುದ್ದೆಗಳನ್ನು ಅಲಂಕರಿಸಿ, ಸಾಧನೆ ಮಾಡಬೇಕು. ನನ್ನ ಏಳಿಗೆಗೂ ಛಲವಾದಿ ಸಮುದಾಯದವರು ಸಾಕಷ್ಟು ಶ್ರಮಿಸಿದ್ದಾರೆ. ಶೈಕ್ಷಣಿಕವಾಗಿ ಸಾಧನೆ ಮಾಡುವ ಮೂಲಕ ಉನ್ನತ ಸ್ಥಾನಮಾನವನ್ನು ಸಮಾಜದ ಮಕ್ಕಳು ಅಲಂಕರಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನೀವು ಇಲ್ಲಿ ಜಾಗತ ತೀರ್ಮಾನ ಮಾಡಿಕೊಳ್ಳಿ. ಭವನಕ್ಕಾಗಿ ₹1.87 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಖಾತೆಯಲ್ಲಿ ₹1.5 ಕೋಟಿ ಇದೆ. ಯಾವ ಜಾಗವೆಂದು ನೀವೇ ತೀರ್ಮಾನಿಸಿ, ಹೇಳಿ. ಅಲ್ಲಿಯೇ ನಾವು ಅಂಬೇಡ್ಕರ ಭವನ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರವು ನನೆಗುದಿಗೆ ಬಿದ್ದಿದೆ. ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲೇ ಭವನ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.

- - - (-ಫೋಟೋ: ಎಸ್‌.ಎಸ್‌. ಮಲ್ಲಿಕಾರ್ಜುನ)