ಸಾರಾಂಶ
ಹೊಸಪೇಟೆ: ಸಿಗರೇಟು, ಗುಟ್ಕಾ, ಮದ್ಯಪಾನ ಸಂಪೂರ್ಣ ನಿಷೇಧಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಪೊಲೀಸರೇ ನಿರ್ಲಕ್ಷ್ಯ ಮಾಡಿದರೆ ಏನು ಮಾಡಬೇಕು? ಪೊಲೀಸರೇ ದೌರ್ಜನ್ಯ ಎಸಗಿದರೆ ಯಾರ ಬಳಿ ದೂರು ಸಲ್ಲಿಸಬೇಕು? ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಈಗಲೂ ಏಕೆ ಜೀವಂತವಾಗಿದೆ? ಮಕ್ಕಳ ಶಿಕ್ಷಣಕ್ಕಾಗಿ ಸರಿಯಾದ ಸಮಯಕ್ಕೆ ಹಳ್ಳಿಗಾಡಿನಲ್ಲಿ ಬಸ್‌ಗಳು ಏಕೆ ಓಡಿಸುತ್ತಿಲ್ಲ?
ಮಕ್ಕಳ ರಕ್ಷಣಾ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಕ್ಕಳೊಂದಿಗೆ ಮುಕ್ತ ಸಂವಾದ ಹಾಗೂ ಮಕ್ಕಳ ಸಂಬಂಧಿಸಿದ ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು.ಶಾಲಾ, ಕಾಲೇಜು ಆವರಣದಲ್ಲಿ ಗುಟ್ಕಾ, ತಂಬಾಕು ನಿಯಂತ್ರಣಕ್ಕೆ ಏಕೆ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಶಾಲಾ ಬಾಲಕನೋರ್ವ ಕೇಳಿದ ಪ್ರಶ್ನೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ಈ ಕುರಿತು ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಆಯೋಗದಿಂದ ಪತ್ರ ಬರೆಯಲಾಗುವುದು ಎಂದು ಉತ್ತರಿಸಿದರು.
ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಏಕೆ ಮಾಡಿಲ್ಲ ಎಂದು ಶಾಲಾ ಬಾಲಕಿ ಪ್ರಶ್ನೆ ಮಾಡಿದರು. ಆಗ ಇದು ಸರ್ಕಾರ ಮಟ್ಟದ ಪ್ರಶ್ನೆಯಾಗಿದ್ದು, ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಉತ್ತರಿಸಿದರು.ಪೊಲೀಸರೇ ದೌರ್ಜನ್ಯ ಎಸಗಿದರೆ ಯಾರ ಬಳಿ ದೂರಬೇಕು?: ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಪೊಲೀಸರೇ ನಿರ್ಲಕ್ಷ್ಯ ಮಾಡಿದರೆ ಏನು ಮಾಡಬೇಕು? ಪೊಲೀಸರೇ ದೌರ್ಜನ್ಯ ಎಸಗಿದರೆ ಯಾರ ಬಳಿ ದೂರು ಸಲ್ಲಿಸಬೇಕು ಎಂದು ಶಾಲಾ ಬಾಲಕಿ ಎಸ್ಪಿ ಶ್ರೀಹರಿಬಾಬು ಅವರಿಗೆ ಸಂವಾದದಲ್ಲಿ ಪ್ರಶ್ನಿಸಿದರು.
ಈ ಪ್ರಶ್ನೆ ಉತ್ತಮದ್ದಾಗಿದೆ. ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಹೇಳಬಹುದು. 112 ಕರೆ ಮಾಡಬಹುದು. ಅಲ್ಲದೇ, ಪೊಲೀಸ್ ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಎಸ್ಪಿ ಅವರ ಬಳಿಯೂ ದೂರಬಹುದು. ಆ ರೀತಿ ನಡೆದರೆ ಕಾನೂನು ರೀತ್ಯ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು.ಬಾಲಕರು ಬೈಕ್ ಓಡಿಸಬಹುದಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಅವರು, ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕು. ಜತೆಗೆ ತಮ್ಮ ಕರ್ತವ್ಯ ಕೂಡ ನಿಭಾಯಿಸಬೇಕು. ಬಾಲಕರು ಬೈಕ್ ಓಡಿಸುವುದು ಕಾನೂನು ರೀತ್ಯ ಅಪರಾಧವಾಗಿದೆ. ಪಾಲಕರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. ಹಾಗಾಗಿ ಚಾಲನಾ ಪರವಾನಗಿ ಪಡೆದುಕೊಂಡೇ ಬೈಕ್‌ಗಳನ್ನು ಓಡಿಸಬೇಕು. ಈ ನೆಲದ ಕಾನೂನುಗಳನ್ನು ಪರಿಪಾಲಿಸಬೇಕು ಎಂದರು.
ದೌರ್ಜನ್ಯ ನಡೆದಾಗ ಮಕ್ಕಳು ಯಾರನ್ನೂ ಸಂಪರ್ಕಿಸಬೇಕು? ಎಂದು ವಿದ್ಯಾರ್ಥಿ ರಾಹುಲ್ ಪ್ರಶ್ನಿಸಿದಾಗ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಡಾ. ಎಂ.ಆರ್. ರವಿ ಉತ್ತರಿಸಿ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ದೂರಬೇಕು. ಮಕ್ಕಳ ಕಾಯ್ದೆಗಳು ಪರಿಣಾಮಕಾರಿಯಾಗಿವೆ. ದೌರ್ಜನ್ಯಗಳು ನಡೆದಾಗ ಕರೆ ಮಾಡಿ ತಿಳಿಸಬೇಕು. ಸಮಾಜ ಸುಧಾರಣೆಗೆ ಮಕ್ಕಳು ಮುಂದಾಗಬೇಕು ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಬಾಲ್ಯ ವಿವಾಹ ತಡೆಗೆ ಎಲ್ಲರೂ ಸಹಕರಿಸಬೇಕು. ತನ್ನ ಸಹಪಾಠಿ ಶಾಲೆಗೆ ಸತತ ನಾಲ್ಕು ದಿನಗಳಿಂದ ಗೈರಾಗಿದ್ದಾರೆ ಎಂದು ತಿಳಿದರೆ 1098ಗೆ ಕರೆ ಮಾಡಬೇಕು. ಬಾಲ್ಯ ವಿವಾಹ ನಡೆಯುತ್ತಿದೆ ಎಂದು ಕರೆ ಮಾಡಿ ತಿಳಿಸಬೇಕು. ಸಮಾಜದಲ್ಲಿ ಬೇರೂರಿರುವ ಅನಿಷ್ಟ ಪದ್ಧತಿ ಹೋಗಲಾಡಿಸಲು ನಾವೆಲ್ಲರೂ ಸನ್ನದ್ಧರಾಗಬೇಕು ಎಂದರು.
ಬಸ್ ಸಮಸ್ಯೆ, ಭ್ರೂಣಹತ್ಯೆ ಕುರಿತು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು. ಶಾಲೆಗಳಲ್ಲಿ ಶೌಚಾಲಯ, ಗ್ರಂಥಾಲಯ, ಗಣಕಯಂತ್ರ, ಪ್ರಯೋಗಾಲಯ, ಆಟದ ಮೈದಾನದ ಬಗ್ಗೆಯೂ ಮಕ್ಕಳು ಜಿಲ್ಲಾಡಳಿತದ ಗಮನ ಸೆಳೆದರು. ಕೆಲ ಶಾಲಾ ಆವರಣಗಳಲ್ಲಿ ಮದ್ಯದ ಬಾಟಲಿ ಕೂಡ ದೊರೆಯುತ್ತಿವೆ ಎಂದು ಶಾಲಾ ಮಕ್ಕಳೇ ದೂರಿದರು.ಮಕ್ಕಳ ಆಯೋಗದ ಮಾಜಿ ಸದಸ್ಯ ಹಾಗೂ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಎಚ್.ಸಿ. ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್. ಶ್ವೇತಾ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಡಿಸಿಪಿಒ ಸುದೀಪ್‌ಕುಮಾರ ಉಂಕಿ ಇದ್ದರು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.