ಪುರೋಹಿತ್ಯ ಹದ್ದುಬಸ್ತಿನಲ್ಲಿಡದಿದ್ದರೆ ರಕ್ತಕ್ರಾಂತಿ

| Published : Jan 30 2025, 12:31 AM IST

ಪುರೋಹಿತ್ಯ ಹದ್ದುಬಸ್ತಿನಲ್ಲಿಡದಿದ್ದರೆ ರಕ್ತಕ್ರಾಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಭಾರತ ಸಂವಿಧಾನವನ್ನು ರದ್ದುಪಡಿಸಿ ಪುರೋಹಿತರ ಹಿತಕಾಯುವ ಸಂವಿಧಾನ ಮಾಡಲು ಹೊರಟಿದ್ದು ಅತ್ಯಂತ ಅಪಾಯಕಾರಿ. ಪುರೋಹಿತ್ಯವನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ಸಂವಿಧಾನವನ್ನು ರದ್ದುಪಡಿಸಿ ಪುರೋಹಿತರ ಹಿತಕಾಯುವ ಸಂವಿಧಾನ ಮಾಡಲು ಹೊರಟಿದ್ದು ಅತ್ಯಂತ ಅಪಾಯಕಾರಿ. ಪುರೋಹಿತ್ಯವನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಶರಣ ಸಂಸ್ಕೃತಿ ಸಂರಕ್ಷಣಾ ವೇದಿಕೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳು ನಮಗೆ ಗೌರವಿಸುವ ಸಂವಿಧಾನ ಬೇಕು ಎಂದರು. ಅಮಿತ್ ಶಾ ಸಂಸತ್ತಿನಲ್ಲೇ ಡಾ.ಅಂಬೇಡ್ಕರ ಅವರ ಬಗ್ಗೆ ಕೇವಲವಾಗಿ ಮಾತನಾಡಿದರು, ಇಂತಹವರೆಲ್ಲ ಸೇರಿ ವಲಸಿಗರಾದ ಪುರೋಹಿತ ವರ್ಗದ ಬೆನ್ನು ಹತ್ತಿದ್ದು, ಇವರ ಕುತಂತ್ರದಿಂದಲೇ ಭಾರತದ ಶಾಂತಿ, ನೆಮ್ಮದಿ ಹಾಳಾಗಿದೆ. ಬೇರೊಂದು ಸಂವಿಧಾನ ರೂಪಿಸುವುದು ದೇಶದ ಅಸ್ತಿತ್ವಕ್ಕೆ ಮಾರಕವಾದ ವಿಚಾರ. ಹಾಗಾಗಿ ನಾವು ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದು ಹೇಳಿದರು.

ಡಾ.ರವಿಕುಮಾರ ಬಿರಾದಾರ ಮಾತನಾಡಿ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಸನಾತನ ಧರ್ಮಿಯರು ಭಾರತ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದುಕೊಂಡು ತಮ್ಮದೇ ಆದ ಸಂವಿಧಾನವನ್ನು ಫೆಬ್ರುವರಿ 3ರಂದು ಬಿಡುಗಡೆ ಮಾಡುತ್ತಿದ್ದಾರೆ. ಡಾ.ಅಂಬೇಡ್ಕರ ಬರೆದ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ವಿರುದ್ಧ ಯಾರೇ ಒಂದು ಶಬ್ದ ಮಾತನಾಡಿದರೂ ಅದು ರಾಷ್ಟ್ರವಿರೋಧಿ ಆಗುತ್ತದೆ. ಸಂವಿಧಾನ ಧಿಕ್ಕರಿಸಿ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದು ಭಾರತದ ವಿರೋಧಿ ಚಟುವಟಿಕೆ ಆಗಿದೆ ಎಂದು ಕಿಡಿಕಾರಿದರು.

ಸನಾತನ ಧರ್ಮವನ್ನು ಧಿಕ್ಕರಿಸಿ ಹೊರಬಂದು ಲಿಂಗಾಯತ ಧರ್ಮವನ್ನು ಬಸವಣ್ಣನವರು ಮಾಡಿದ್ದಾರೆ. ಮನುಸ್ಮೃತಿ ಆಧಾರದ ಮೇಲೆ ಸಂವಿಧಾನ ಮಾಡುವ ಇವರು ಧರ್ಮ ಆಧಾರಿತ ಸಂವಿಧಾನ ಮಾಡಲು ಹೊರಟಿದ್ದಾರೆ. ಚಾತುರ್ವರ್ಣ ವ್ಯವಸ್ಥೆ ವಿರೋಧಿಸಿದ ಬಸವಣ್ಣನವರು ಲಿಂಗಾಯತ ಧರ್ಮ ಹುಟ್ಟು ಹಾಕಿದರು. ಬಸವಣ್ಣನ ಧರ್ಮಕ್ಕೆ ಇದರಿಂದ ಅಪಾಯವಿದೆ. ಎಲ್ಲ ಧರ್ಮಿಯರು ಕೂಡಿ ಬಾಳುವ ವ್ಯವಸ್ಥೆ ಭಾರತದಲ್ಲಿದೆ. ಮುಂದೆ ಇವರು ಸನಾತನ ಧರ್ಮ ಬೆಂಬಲಿಸುವವರು ಮಾತ್ರ ಮತ ಮಾಡಬೇಕು, ಅವರು ಮಾತ್ರ ಚುನಾವಣೆ ಸ್ಪರ್ಧಿಸಬೇಕು ಎಂದು ಹೇಳುತ್ತಾರೆ. ಗುರುಕುಲ ಶಿಕ್ಷಣದಲ್ಲಿ ಏಕಲವ್ಯನ ಹೆಬ್ಬೆಟ್ಟು ಕಿತ್ತುಕೊಂಡವರು ಇವರು. ಇವರಲ್ಲಿ ಎಲ್ಲರೂ ಸಮಾನರು ಎಂಬುದು ಇಲ್ಲ. ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದರೆ ಬೇರೆ ಧರ್ಮದವರು ಎಲ್ಲಿ ಹೋಗಬೇಕು?. ನಮಗೂ ಒಂದು ಲಿಂಗಾಯತ ರಾಷ್ಟ್ರ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ಡಾ.ಅಂಬೇಡ್ಕರ ಅವರ ಸಂವಿಧಾನವನ್ನೇ ಬುಡಮೇಲು ಮಾಡುವ ತಂತ್ರವನ್ನು ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಸನಾತನವಾದಿಗಳು ಮಾಡುತ್ತಿದ್ದು, ಇದಕ್ಕೆ ಲಿಂಗಾಯತರ ವಿರೋಧವಿದೆ. ತಕ್ಷಣವೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಇದನ್ನು ತಡೆಯಬೇಕು ಎಂದರು.

ಬಳಿಕ, ಕಲ್ಲಪ್ಪ ಕಡೇಚೂರ ಮಾತನಾಡಿ, ವಚನಾನಂದ ಸ್ವಾಮೀಜಿ ಕುಂಭಮೇಳಕ್ಕೆ ಹೋಗಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಕೆಳವರ್ಗದ ಜನರನ್ನು ತೆಗೆದುಕೊಂಡು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿ ಮನುಕುಲ‌ ನಿರ್ಮಿಸಿದರು. ಲಿಂಗಾಯತ ಧರ್ಮ ಸನಾತನ ಧರ್ಮದ ವಿರುದ್ಧ ಇದೆ, ಇದು ಉಳಿದೇ ಉಳಿಯುತ್ತದೆ ಎಂದರು.

ಮಹಾದೇವಿ ಗೋಕಾಕ ಮಾತನಾಡಿ, ಭಾರತವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದ್ದು ಸರಿಯಲ್ಲ. ಶರಣ ಸಂಸ್ಕ್ರತಿ ಹಾಗೂ ಅಂಬೇಡ್ಕರ ಸಂವಿಧಾನವನ್ನು ಉಳಿಸುವುದು ಎಲ್ಲರ ಕರ್ತವ್ಯ. ಭಾರತದಲ್ಲಿ ಯಾವುದೇ ವರ್ಗಗಳಲ್ಲಿ ಬೇಧಭಾವ ಇಲ್ಲದ ಸಂವಿಧಾನ ಇರುವುದರಿಂದ ಇದನ್ನೇ ಪಾಲಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶರಣ ಸಂಸ್ಕ್ರತಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಪ್ರಭುಗೌಡ ಪಾಟೀಲ, ಶಿವಲಿಂಗಪ್ಪ ಕಲಬುರಗಿ, ಮೀನಾಕ್ಷಿ ಪಾಟೀಲ, ಶೋಭಾ ಬಿರಾದಾರ, ಚಂದ್ರಶೇಖರ ಘಂಟೆಪ್ಪಗೋಳ ಉಪಸ್ಥಿತರಿದ್ದರು.-------------

ಕೋಟ್.....

ಭಾರತದ ಎಲ್ಲ ಅವಾಂತರಗಳಿಗೂ ಕಾರಣರಾದ ಈ ಆರ್ಯರನ್ನು ಹದ್ದುಬಸ್ತಿನಲ್ಲಿ ಇಡಬೇಕು, ಇಲ್ಲ ಶಸ್ತ್ರಚಕಿತ್ಸೆ ಮಾಡಿ ಬಿಸಾಕಬೇಕು. ಪೂರ್ಣವಾಗಿ ವೈದಿಕರನ್ನು ನಂಬಿದ ಬಿಜೆಪಿಯ ಕತ್ತನ್ನು ಅವರು ಕೊಯ್ಯುತ್ತಾರೆ. ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡು ಅಂಬೇಡ್ಕರ ಸಂವಿಧಾನಕ್ಕೆ ಬೆಲೆ ಕೊಡಬೇಕು. ಪುರೋಹಿತ್ಯವನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ.

- ವಿರತೀಶಾನಂದ ಸ್ವಾಮೀಜಿ, ವಿರಕ್ತಮಠ ಮನಗೂಳಿ