ಚಿಕ್ಕಮಗಳೂರು: ಗ್ರಾಪಂ ಸದಸ್ಯರ ಸಮಸ್ಯೆ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟ

| Published : Apr 03 2024, 01:42 AM IST / Updated: Apr 03 2024, 08:17 AM IST

ಚಿಕ್ಕಮಗಳೂರು: ಗ್ರಾಪಂ ಸದಸ್ಯರ ಸಮಸ್ಯೆ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆ ಪರಿಹಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ವಾಣಿ ಎಚ್ಚರಿಕೆ

 ನರಸಿಂಹರಾಜಪುರ :  ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆ ಪರಿಹಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಸದಸ್ಯೆ ಹಾಗೂ ಕಡಹಿನಬೈಲು ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಇಂದು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಬಗೆಹರಿಸಲು ಮುಂದಾಗುತ್ತಿದ್ದಾರೆ. ಅಲ್ಲದೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಅಧಿಕಾರಿಗಳೊಂದಿಗೆ ಶ್ರಮಿಸುತ್ತಿದ್ದಾರೆ. ಆದರೆ, ರಾಜ್ಯದ ಕೆಲವು ಗ್ರಾಪಂಗಳಲ್ಲಿ ಪಿಡಿಒ, ಸಿಬ್ಬಂದಿ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಇದರ ಜೊತೆಗೆ ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಸದಸ್ಯರನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬಂದಿದೆ. ಅನೇಕ ಸಂದರ್ಭದಲ್ಲಿ ಅಧಿಕಾರಿಗಳ ನಡವಳಿಕೆ ಖಂಡಿಸಿ ಗ್ರಾಪಂ ಮುಂದೆ ಧರಣಿ ಕುಳಿತ ಸದಸ್ಯರಿಗೆ ಸುಳ್ಳು ಭರವಸೆ ನೀಡಿ ಸಮಾಧಾನ ಮಾಡಿದ್ದಾರೆ ಹೊರತು ನ್ಯಾಯ ಕೊಡಿಸಿಲ್ಲ ಎಂದು ದೂರಿದ್ದಾರೆ.

ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೆ.ವೆಂಕಟಾಪುರ ಗ್ರಾಪಂ ಮಹಿಳಾ ಸದಸ್ಯೆ ಶಶಿಕಲಾ ಅಂಬರೀಷ್‌ ಜೊತೆ ಅಲ್ಲಿನ ಅಧಿಕಾರಿಗಳು ವರ್ತಿಸಿದ ರೀತಿ ಸರಿಯಲ್ಲ. ಅಲ್ಲಿನ ಪಿಡಿಒ, ಸದಸ್ಯೆಯ ಪ್ರಶ್ನೆಗಳಿಗೆ ಸಾಮಾನ್ಯ ಸಭೆಯಲ್ಲಿ ಸರಿಯಾದ ಉತ್ತರ ನೀಡದೆ ನಿರ್ಲಕ್ಷಿಸಿ ಗೂಂಡಾ ವರ್ತನೆ ತೋರಿರುವುದು ಖಂಡನೀಯವಾಗಿದೆ. ಈ ವಿಚಾರವನ್ನು ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದಿಂದ ರಾಜ್ಯ ಪಂಚಾಯತ್‌ ರಾಜ್‌ ಆಯುಕ್ತ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ಗೆ ದೂರು ನೀಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಪಿಡಿಒ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಮಾಜದಲ್ಲಿ ಗೌರವವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಗ್ರಾಪಂ ಮಹಿಳಾ ಸದಸ್ಯರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ, ನಿರ್ಲಕ್ಷ್ಯ ಭಾವದಿಂದ ನೋಡುವುದು ಸರಿಯಲ್ಲ. ಸದಸ್ಯರ ರಕ್ಷಣೆಗೆ ಹಾಗೂ ಉತ್ತಮ ಆಡಳಿತಕ್ಕಾಗಿ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.