ಕೆರೆಯಲ್ಲಿ ಹೂಳು ತೆಗೆದರೆ ಅಂತರ್ಜಲ ವೃದ್ಧಿ

| Published : Jul 05 2024, 12:45 AM IST

ಸಾರಾಂಶ

ಸೂಲಿಬೆಲೆ: ಕೆರೆಗಳ ಹೂಳು ತೆಗೆದು ಅಭಿವೃದ್ದಿ ಮಾಡುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಹೇಳಿದರು.

ಸೂಲಿಬೆಲೆ: ಕೆರೆಗಳ ಹೂಳು ತೆಗೆದು ಅಭಿವೃದ್ದಿ ಮಾಡುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಹೇಳಿದರು.

ಹೋಬಳಿಯ ಗುಳ್ಳಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಮ್ಮ ಊರು ನಮ್ಮ ಕೆರೆ’ ಅಭಿವೃದ್ದಿ ಯೋಜನೆಯಡಿ ಗುಳ್ಳಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ೨೦೨೪-೨೫ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿಪಡಿಸಿ ಗ್ರಾಮಸ್ಥರ ಅನುಕೂಲಕ್ಕೆ ನೀಡಲಾಗುವುದು. ೧೬ ಎಕರೆ ವಿಸ್ತೀರ್ಣದ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೂಳು ತೆಗೆದು ಅಭಿವೃದ್ಧಿ ಮಾಡಲಾಗುವುದು. ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಿ ಕೃಷಿ ಚಟುವಟಿಕೆಗಳು ಹಾಗೂ ಜಾನುವಾರಿಗೆ ಕುಡಿಯುವ ನೀರಿಗೆ ಸಹಕಾರಿಯಾಗಲಿದೆ. ಸುಮಾರು ೨೫೦ ಎಕರೆ ವಿಸ್ತೀರ್ಣದ ಜಮೀನುಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ದೊಡ್ಡಹರಳಗೆರೆ ಗ್ರಾಪಂ ಅಧ್ಯಕ್ಷೆ ನರಸಮ್ಮ ಮಾತನಾಡಿ, ಗುಳ್ಳಹಳ್ಳಿ ಗ್ರಾಮ ಪರಿಮಿತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆರೆ ಹೂಳು ತೆಗೆದು ಅಭಿವೃದ್ಧಿ ಮಾಡಲಿದೆ. ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಪ್ರಮಾಣ, ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯೆ ರೂಪಶ್ರೀ, ವಲಯ ಮೇಲ್ವಿಚಾರಕ ಚಂದನ್, ಕೃಷಿ ಮೇಲ್ವಿಚಾರಕ ಚೇತನ್, ಸೇವಾಪ್ರತಿನಿಧಿ ನಾಗವೇಣಿ, ಹಾಗೂ ಹಾಲಿನ ಡೇರಿ ಸದಸ್ಯರು ಹಾಜರಿದ್ದರು.

ಗ್ರಾಮಸ್ಥರು ಸಭೆಯಲ್ಲಿ ಚರ್ಚಿಸಿ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಯಿತು, ಮುನಿಯಪ್ಪ(ಅಧ್ಯಕ್ಷ), ಜಡಿಯಪ್ಪ(ಉಪಾಧ್ಯಕ್ಷ), ಮಂಜುನಾಥ್ (ಕೋಶಾಧಿಕಾರಿ), ಅನಿತಾ, ವರಲಕ್ಷ್ಮೀ, ಗೌರಮ್ಮ, ನಾರಾಯಣಸ್ವಾಮಿ, ಮರಿಯಪ್ಪ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಕೋಟ್..........

ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆರೆಗೆ ನೀರು ಹರಿಯುವ ಕಾಲುವೆಗಳು ಮುಚ್ಚಿ ಹೋಗಿವೆ. ಕೆರೆಯಲ್ಲಿ ಹೂಳು ತೆಗೆಯುವುದರಿಂದ ನೀರು ಸಂಗ್ರಹಗೊಂಡು ಅಂತರ್ಜಲ ಪ್ರಮಾಣ ಹೆಚ್ಚಾಗುತ್ತದೆ. ಧರ್ಮಸ್ಥಳ ಯೋಜನೆಯ ಈ ಕಾರ್ಯ ಶ್ಲಾಘನೀಯ.

-ಮುನಿಯಪ್ಪ, ಉಪಾಧ್ಯಕ್ಷರು, ಸಹಕಾರ ಬ್ಯಾಂಕ್, ಸೂಲಿಬೆಲೆ

ಚಿತ್ರ; ೦೩ ಸೂಲಿಬೆಲೆ ೦೧ ಜೆಪಿಜೆ ನಲ್ಲಿದೆ