ಯಾರೇ ಬಂದರೂ ಏನೂ ಹೇಳಿದರೂ ನಗರಸಭೆಗೆ ಗ್ರಾಪಂ ಸೇರಿಸುವ ಪ್ರಕ್ರಿಯೆ ವಾಪಸ್ ಪಡೆಯಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಕಂದಾಯ ಕಟ್ಟಲು ಹೊರೆಯಾದರೆ 5 ವರ್ಷ ಜನರ ಕಂದಾಯ ನಾನೇ ಕಟ್ಟುತ್ತೇನೆ ಎಂದು ಶಾಸಕರು ಹೇಳುತ್ತಾರೆ. ಅವರ ವೈಯಕ್ತಿಕ ಹಣ ನಮಗೆ ಬೇಡ. ಗ್ರಾಮಸ್ಥರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಶಾಸಕರ ಆಮಿಷಕ್ಕೆ ಯಾರೂ ಬಲಿಯಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಗ್ರಾಪಂ ಉಳಿಸಲು ನಡೆಸುತ್ತಿರುವ ಚಳವಳಿಗೆ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರು ಬೇರೆ ರೂಪ ಕೊಡಲು ಹೊರಟಿದ್ದಾರೆ. ನಮ್ಮ ಹೋರಾಟ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡರೆ ಅದಕ್ಕೆ ನೀವೇ ಹೊಣೆ ಎಂದು ರೈತ ನಾಯಕಿ ಸುನಂದ ಜಯರಾಂ ಎಚ್ಚರಿಕೆ ನೀಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಪಂ ಉಳಿಸಲು 24 ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ಶಾಸಕರು ಬೇರೆಯವರ ಕುಮ್ಮಕ್ಕುನಿಂದ ನಡೆಯುತ್ತಿದೆ. ಗ್ರಾಮಸ್ಥರ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪ ಮಾಡಿರುವುದನ್ನು ಖಂಡಿಸಿದರು.

ಈ ಹಿಂದೆ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರು, ಪಂಚಾಯ್ತಿ ಸದಸ್ಯರ ಒಪ್ಪಿಗೆ ನೀಡಿದ ಮೇಲೆಗೆ ಗ್ರಾಪಂಅನ್ನು ಮದ್ದೂರು ನಗರಸಭೆಗೆ ಸೇರಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಗ್ರಾಮಕ್ಕೆ ಬಂದು ಮಾತನಾಡಿಲ್ಲ. ಸರ್ವ ಸದಸ್ಯರ ಒಪ್ಪಿಗೆ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರೇ ಬಂದರೂ ಏನೂ ಹೇಳಿದರೂ ನಗರಸಭೆಗೆ ಗ್ರಾಪಂ ಸೇರಿಸುವ ಪ್ರಕ್ರಿಯೆ ವಾಪಸ್ ಪಡೆಯಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಕಂದಾಯ ಕಟ್ಟಲು ಹೊರೆಯಾದರೆ 5 ವರ್ಷ ಜನರ ಕಂದಾಯ ನಾನೇ ಕಟ್ಟುತ್ತೇನೆ ಎಂದು ಶಾಸಕರು ಹೇಳುತ್ತಾರೆ. ಅವರ ವೈಯಕ್ತಿಕ ಹಣ ನಮಗೆ ಬೇಡ. ಗ್ರಾಮಸ್ಥರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಶಾಸಕರ ಆಮಿಷಕ್ಕೆ ಯಾರೂ ಬಲಿಯಾಗುದಿಲ್ಲ ಎಂದರು.

ವಿರೋಧವಿದ್ದರೂ ಒಮ್ಮೆಯೂ ಗ್ರಾಮಕ್ಕೆ ಬಂದು ಜನರ ಅಭಿಪ್ರಾಯ ಸಂಗ್ರಹಿಸದೆ, ಶಾಸಕರು ಗ್ರಾಪಂ ಅನ್ನು ನಗರಸಭೆಗೆ ಸೇರಿಸಲು ತೀರ್ಮಾನಿಸಿದ್ದಾರೆ. ಗ್ರಾಪಂ ಅಧ್ಯಕ್ಷರು, ಸದಸ್ಯರ ಅಭಿಪ್ರಾಯದ ವಿರುದ್ಧ ಗೆಜ್ಜಲಗೆರೆ ಇತರೆ ಗ್ರಾಪಂಗಳು ನಗರಸಭೆ ಸೇರ್ಪಡೆ ಬಗ್ಗೆ ಶಾಸಕರೇ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಸಾಮಾನ್ಯ ಸಭೆಯ ವಿಷಯ ಸೂಚಿಯಲ್ಲಿ ಗ್ರಾಪಂ ನಗರಸಭೆ ಸೇರಿಸುವ ವಿಷಯ ತಂದಿಲ್ಲ. ಈ ವಿಚಾರವಾಗಿ ಒಂದು ದಿನವೂ ಗ್ರಾಮಸ್ಥರೊಂದಿಗೆ ಮಾತನಾಡಿಲ್ಲ. ಗ್ರಾಮ ಸಭೆ ವಿರೋಧದ ನಿರ್ಣಯ ಶಾಸಕರ ಗಮನಕ್ಕೆ ಬಂದಿಲ್ಲವೇ. 2025ರ ಆಗಸ್ಟ್ 16ರಂದು ಕಾರ್ಯಸೂಚಿಯಲ್ಲಿ ತಂದು ವಿರೋಧದ ತೀರ್ಮಾನ ಕೈಗೊಂಡು ಹೈಕೋರ್ಟ್ ಗೆ ಹೋಗಿರುವುದು ಸರಿಯಾದ ಕ್ರಮವೇ ಎಂದು ಪ್ರಶ್ನಿಸಿದರು.

44 ವರ್ಷಗಳಿಂದ ರೈತಸಂಘ ಯಾರ ಕುಮ್ಮಕ್ಕಿನಿಂದ ಹೋರಾಟ ನಡೆಸಿಕೊಂಡು ಬಂದಿಲ್ಲ. ನಡೆದಿದ್ದರೆ ಸಾಬೀತು ಮಾಡಿ. ನಾವು ಚರ್ಚೆಗೆ ಸಿದ್ಧ. ನೀವೇ ದೂರವಾಣಿ ಮೂಲಕ ನಾನು ಊರಿಗೆ ಬರುತ್ತೇನೆ. ಬೇಡ ಎಂದರೆ ಕಂಡಿತ ಈ ವಿಚಾರ ಕೈ ಬಿಡುತ್ತೇವೆ ಎಂದು ಹೇಳಿದ್ದರು. ಆದರೆ, ಶಾಸಕರು ಗ್ರಾಮಕ್ಕೆ ಏಕೆ ಬಂದಿಲ್ಲ ಎಂದು ಮರು ಪ್ರಶ್ನೆ ಹಾಕಿದರು.

ನಿಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ನಾವು ಕೇಳುತ್ತಿಲ್ಲ. ಯಾರನ್ನು ಚಳವಳಿಗೆ ಬನ್ನಿ ಎಂದು ಕೇಳಿಲ್ಲ. ವಿಪಕ್ಷದವರು ಮಾಹಿತಿ ಕೇಳಿದ್ದರೂ ಕೊಟ್ಟಿದ್ದೇವೆ. ಮತ್ತೊಬ್ಬರು ಕೇಳಿದರೆ ಕೊಡುತ್ತೇವೆ. ಅವರು ಚಳವಳಿಗೆ ಬಂದು ಬೆಂಬಲ ಕೊಟ್ಟಿದ್ದಾರೆ. ಗೌರವಿಸಿದ್ದೇವೆ ಅಷ್ಟೆ. ಗೆಜ್ಜಲಗೆರೆ ನಗರಸಭೆಯಾಗಿ ಉಳಿಯುವ ವರೆಗೂ ಯಾವುದೇ ಕಾರಣಕ್ಕೂ ನನ್ಮ ಹೋರಾಟವನ್ನು ವಾಪಸ್ ಪಡೆಯಲ್ಲ ಎಂದರು.

ಚುನಾವಣೆಗಳಲ್ಲಿ ಆಸೆ ತೋರಿಸಿದಂತೆ ಶಾಸಕರು ವೈಯಕ್ತಿಕ ಹಣದ ಬಗ್ಗೆ ಮಾತನಾಡುತ್ತಿಲ್ಲ. ಇದು ತಪ್ಪು. ವೈಯಕ್ತಿಕ ಹಣ ಇಲ್ಲಿಗೆ ಬರಬಾರದು. ಜನರಿಗೆ ಹಣದ ಆಸೆ ತೋರಿಸಬಾರದು. ನಿಮ್ಮ ಆಮಿಷಕ್ಕೆ ಹೋರಾಟಗಾರರು ಮಣಿಯುವುದಿಲ್ಲ. ನಮ್ಮ ಹೋರಾಟ ಯಾವುದೇ ಕುಮ್ಮಕ್ಕು, ಪ್ರಚೋದನೆ ಒಳಗಾಗುವ ಜಾಯಮಾನವಲ್ಲ. ನಾವು ಸಾಸಿವೆಯಷ್ಟು ಹಂಗಲ್ಲಿ ಬದುಕುತ್ತಿಲ್ಲ. ಹೋರಾಟವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ನಡೆಸುತ್ತಿದ್ದೇವೆ ಎಂದರು.

ರಾಜಕಾರಣದ ಬಗ್ಗೆ ಬೇರೆ ವೇದಿಕೆಯಲ್ಲಿ ಮಾತನಾಡಬೇಕು. ಶಾಸಕರು ಪಂಚಾಯ್ತಿ ವ್ಯವಸ್ಥೆಯನ್ನು ಕೊಲೆ ಮಾಡುತ್ತಿದ್ದಾರೆ. ಗ್ರಾಪಂಗಳನ್ನು ನಗರಸಭೆಗೆ ಸೇರಿಸಿ ಸೋಮನಹಳ್ಳಿ, ಚಾಮನಹಳ್ಳಿ, ಗೊರವಾಲೆ ಗ್ರಾಪಂಗಳ ಜನರ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಇದನ್ನು ಪ್ರಜೆಗಳು ಕೇಳುವ ಹಕ್ಕು ಇಲ್ಲವೇ. ನಾವು ಯುಧ್ಧ ಮಾಡುತ್ತಿಲ್ಲ. ಪ್ರಜಾಪ್ರಭುತ್ವದ ಒಳಗೆ ಹಕ್ಕು ಕೇಳುತ್ತಿದ್ದೇವೆ. ನಮ್ಮ ಭೂಮಿ, ರೈತರನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಶಾಸಕ ಅವರಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ರಾಧಾ, ಸದಸ್ಯರಾದ ಸುವರ್ಣ, ಜಿ.ಸಿ.ಶಿವಕುಮಾರ್, ಎಸ್.ಟಿ.ಭಾಗ್ಯ, ಜಿ.ಬಿ.ಶಿವಯ್ಯ, ಜಯಮ್ಮ, ಟಿ.ಲಕ್ಷ್ಮಿ, ಮಾಜಿ ಸದಸ್ಯ ಜಿ.ಪಿ.ಮೋಹನ್ ಕುಮಾರ್, ರೈತ ಮುಖಂಡರಾದ ಜಿ.ಎ.ಶಂಕರ್, ಜಿ.ಎಚ್.ವೀರಪ್ಪ, ಚಂದ್ರಶೇಖರ್, ಜಿ.ಡಿ.ಚಂದ್ರಶೇಖರ್ ಮತ್ತಿತರರಿದ್ದರು. ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ನನಗೆ ಗೊತ್ತಿಲ್ಲದೆ ಪತ್ರಕ್ಕೆ ಸಹಿ: ಗ್ರಾಪಂ ಅಧ್ಯಕ್ಷೆ ರಾಧ

ಮದ್ದೂರು:

ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿಚಾರವಾಗಿ ಗ್ರಾಪಂ ಸಭೆಯಲ್ಲಿ ಅಧ್ಯಕ್ಷರ ಇತರೆ ವಿಷಯದಲ್ಲಿ ಪಾಸ್ ಮಾಡಿ ನನಗೆ ಗೊತ್ತಿಲ್ಲದೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಅಧ್ಯಕ್ಷೆ ರಾಧ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದೂರು ನಗರಸಭೆಗೆ ಗ್ರಾಪಂ ಸೇರ್ಪಡೆ ವಿಚಾರವಾಗಿ ನಮ್ಮ ಪಂಚಾಯ್ತಿಗೆ ಲೆಟರ್ ಬಂದಾಗ ನಾವು ಎಲ್ಲಾ ಗ್ರಾಮಸ್ಥರು ಸೇರಿ ಹೇಳುತ್ತೇವೆ ಎಂದು ತಿಳಿಸಿದ್ದೇವು. ಅಲ್ಲದೇ, ಎರಡು ಬಾರಿ ಗ್ರಾಮಸ್ಥರೆಲ್ಲರನ್ನು ಕರೆಸಿದ್ದೇವು. ಗ್ರಾಮದ ಮುಖ್ಯಸ್ಥರೊಂದಿಗೆ ಚರ್ಚಿಸಿ ಆಗಲ್ಲ ಎಂದು ತಿಳಿಸಿದ್ದೇವು ಎಂದರು.

ಗ್ರಾಪಂನ 9 ಸದಸ್ಯರು ವಿರೋಧವಿತ್ತು. ಓರ್ವ ಸದಸ್ಯ ತಟಸ್ಥವಾಗಿದ್ದ. ಅಧಿಕೃತವಾಗಿ ವಿರೋಧ ಮಾಡಲಾಗಿತ್ತು. ಆದರೆ, 2ನೇ ಸಭೆಯಲ್ಲಿ ಅಜೆಂಡಾದಲ್ಲಿ ಚರ್ಚೆಗೆ ತರದೆ ಅಧ್ಯಕ್ಷರ ಇತರೆ ವಿಷಯದಲ್ಲಿ ಪಾಸ್ ಮಾಡಿದ್ದಾರೆ. ಮಾಜಿ ಅಧ್ಯಕ್ಷೆ ಸುವರ್ಣ ಅಧ್ಯಕ್ಷತೆಯಲ್ಲಿ ವಿಷಯ ಪಾಸಾಗಿದೆ. ಆದರೆ, ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ಪತ್ರಕ್ಕೆ ಯಾವಾಗ ನನ್ನ ಸಹಿ ಹಾಕಿಸಿಕೊಂಡರು ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಪಂಚಾಯ್ತಿಗೆ ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಂಚಾಯ್ತಿಯಲ್ಲಿ ಅವಿದ್ಯಾವಂತ, ವಿದ್ಯಾವಂತ ಸದಸ್ಯರಿದ್ದಾರೆ. ಯಾರೋ ಏನು ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಗೆಜ್ಜಲಗೆರೆ ಗ್ರಾಪಂ ಆಗಿ ಉಳಿಯಬೇಕು. ಈ ಹೋರಾಟದಲ್ಲಿ ರಾಜಕೀಯ ಪ್ರೇರಿತವಾಗಿಲ್ಲ. ಗ್ರಾಪಂನ ಎಲ್ಲಾ 9 ಸದಸ್ಯರು ಇಲ್ಲೆ ಇದ್ದೇವೆ. ನಗರಸಭೆ ನಮಗೆ ಬೇಕಾಗಿಲ್ಲ. ಗೊತ್ತಿಲ್ಲದೆ ಸಹಿ ಮಾಡಿದ್ದೇವೆ ಎಂದರು.

ಶಾಸಕರು ಅವರ ತನ ಉಳಿಸಿಕೊಳ್ಳಲು ಅಭಿವೃದ್ಧಿ ಕೆಲಸಗಳನ್ನು ಅವರ ಪಾಡಿಗೆ ಮಾಡಲಿ. ರೈತ ಸಂಘ, ಮಹಿಳೆಯರು, ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡುತ್ತಿದ್ದಾರೆ. ಚಳವಳಿ ಯಾವುದೇ ರಾಜಕೀಯ ಪ್ರೇರಿತವಲ್ಲ. ಶಾಸಕರು ಏನಾದರೂ ಮಾತಾಡಬೇಕು ಎಂಬ ಅಭಿಪ್ರಾಯ ಇದ್ದರೆ ವೇದಿಕೆ ಹಾಕುತ್ತೇವೆ ಅಲ್ಲಿ ಮಾತನಾಡಲಿ ಎಂದರು.