ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಮೇಸ್ಟ್ರುಗಳು ಸಿಗರೇಟು ಸೇದೋದು ನಿಲ್ಲಿಸಿದ್ರೆ ಎಲ್ಲ ಸರಿ ಹೋಗುತ್ತೆ. ಮೊದಲು ಅವರು ತಂಬಾಕು ಉತ್ಪನಗಳ ಬಳಕೆಯಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಮೂಲಕ ಶಾಲೆಗಳಲ್ಲಿ ತಂಬಾಕು ಬಳಕೆಯ ಮೇಲೆ ಕಟ್ಟು ನಿಟ್ಟಿನ ನಿಗಾವಹಿಸಬೇಕು ಎಂದು ಸೂಚಿಸಿದರು.
ಉಪನಿರ್ದೆಶಕರು ಸಹ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆಯಬೇಕು. ಪ್ರೌಢಶಾಲೆ ಹಾಗೂ ಪಿಯು ಹಂತದಲ್ಲೇ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತವಾಗುವ ಸಂಭವ ಹೆಚ್ಚು. ಶಾಲಾ ಕಾಲೇಜುಗಳ ಆವರಣಗಳನ್ನು ಕಡ್ಡಾಯವಾಗಿ ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕು ಎಂದರು.ನಿಯಮಬಾಹಿರವಾಗಿ ತಂಬಾಕು ಉತ್ಪನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಿದರೆ ಸಾಲದು. ಪದೇ ಪದೇ ನಿಮಯ ಉಲ್ಲಂಘಿಸುವ ಅಂಗಡಿಗಳ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ತಂಬಾಕು ದಾಳಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಬೇಕು. ಬಸ್ ನಿಲ್ದಾಣಗಳು ಸಾರ್ವಜನಿಕ ಸ್ಥಳಗಳಾಗಿವೆ. ಆದರೂ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮಳಿಗೆಗಳಲ್ಲಿಯೇ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಿದೆ. ಇಂತಹ ಅಂಗಡಿಗಳ ಲೈಸ್ ಟೆಂಡರ್ ರದ್ದು ಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪ್ರಸ್ತಕ ವರ್ಷದ ಸಾಲಿನಲ್ಲಿ ಜಿಲ್ಲೆಯ 35 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 12 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ತಂಬಾಕು ನಿಯಂತ್ರಣ ಕೋಶದಿಂದ 60 ದಾಳಿಗಳನ್ನು ನಡೆಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ಸಂಬಂಧ 4 ತರಬೇತಿಯನ್ನು ನೀಡಲಾಗಿದೆ ಎಂದರು.
3 ತಾಲೂಕುಗಳ ತಹಸೀಲ್ದಾರರು ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಗಳನ್ನು ನಡೆಸಿದ್ದಾರೆ. 37 ಶಿಕ್ಷಣ ಮಾಹಿತಿ ಸಂವಹನ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತಂಬಾಕು ಬಳಕೆದಾರ ಜತೆ 20 ಗುಂಪು ಚರ್ಚೆ ನಡೆಸಿ ತಂಬಾಕಿನ ದುಷ್ಪರಿಣಾಮಗಳನ್ನು ತಿಳಿಸಲಾಗಿದೆ. ಜಿಲ್ಲಾ ಮಟ್ಟದ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1993 ಜನರು ಸೇವೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ಇದರಲ್ಲಿ 239 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 25 ಜನರು ತಂಬಾಕು ತ್ಯಜಿಸಿ ಆರೋಗ್ಯ ಜೀವನಕ್ಕೆ ಮರಳಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ ಸಭೆಗೆ ಮಾಹಿತಿ ನೀಡಿದರು.ಶಾಲಾ ಕಾಲೇಜುಗಳಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ತಂಬಾಕಿನ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಾದ್ಯಂತ 60 ತಂಬಾಕು ದಾಳಿಗಳನ್ನು ನಡೆಸಿ, 811 ಪ್ರಕರಣಗಳನ್ನು ದಾಖಲಿಸಲಾಗಿದೆ. ₹89,900 ದಂಡ ವಸೂಲಿ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಪೊಲೀಸ್ ಇಲಾಖೆಯಿಂದ 465 ಪ್ರಕರಣ ದಾಖಲಿಸಿ ₹42,550, ಅಬಕಾರಿ ಇಲಾಖೆಯಿಂದ 34 ಪ್ರಕರಣ ದಾಖಲಿಸಿ ₹6,800 ದಂಡ ವಸೂಲಿ ಮಾಡಲಾಗಿದೆ ಎಂದು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಭುದೇವ ಬಿರಾದರ್ ಸಭೆಯಲ್ಲಿ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಚಿತ್ರದುರ್ಗ ಜಿಲ್ಲೆ ನಮ್ಮಗುರಿ ಎನ್ನುವ ಪೋಸ್ಟರ್ ಗಳನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಮಾನಸಿಕ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಡಾ. ನಾಗರಾಜ್, ಆರ್ ಸಿಎಚ್ ಅಧಿಕಾರಿ ಡಾ. ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್ ಇದ್ದರು.