ವೀರಶೈವ ಜಂಗಮರು ಮಾದಿಗರ ಅನ್ನಕ್ಕೆ ಕನ್ನ ಹಾಕಿದರೆ ಸುಮ್ಮನೆ ಬಿಡುವುದಿಲ್ಲ: ಎಚ್. ಆಂಜನೇಯ

| Published : May 26 2025, 12:17 AM IST

ವೀರಶೈವ ಜಂಗಮರು ಮಾದಿಗರ ಅನ್ನಕ್ಕೆ ಕನ್ನ ಹಾಕಿದರೆ ಸುಮ್ಮನೆ ಬಿಡುವುದಿಲ್ಲ: ಎಚ್. ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಜಂಗಮರು ಬೇಡ ಎನ್ನುವ ಶಬ್ದ ಕದ್ದುಕೊಂಡು ಮಾದಿಗರ ಅನ್ನಕ್ಕೆ ಕನ್ನ ಹಾಕುವ ಹುನ್ನಾರ ನಡೆಸಿದ್ದಾರೆ.

ಜೂನ್ ತಿಂಗಳಲ್ಲಿ ಒಳಮೀಸಲಾತಿ ಘೋಷಣೆಯಾಗುವ ವಿಶ್ವಾಸ: ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಬಳ್ಳಾರಿ

ವೀರಶೈವ ಜಂಗಮರು ಬೇಡ ಎನ್ನುವ ಶಬ್ದ ಕದ್ದುಕೊಂಡು ಮಾದಿಗರ ಅನ್ನಕ್ಕೆ ಕನ್ನ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂದು ನಮೂದಿಸುವ ಮೂಲಕ ತಳ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ವೀರಶೈವ ಜಂಗಮರು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಲ್ಲಿ, ಕೊಟ್ಟವರು ಹಾಗೂ ತೆಗೆದುಕೊಂಡವರ ಜೈಲಿಗೆ ಕಳಿಸುತ್ತೇವೆ. ಮಾದಿಗರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ವೀರಶೈವ ಜಂಗಮರು ಗುರುವಿನ ಸ್ಥಾನದಲ್ಲಿರುವವರು. ಅವರಿಗೂ ಬೇಡ ಜಂಗಮರಿಗೂ ಯಾವುದೇ ಸಂಬಂಧವಿಲ್ಲ. ಬೇಡ ಜಂಗಮರು ಮಾದಿಗರ ಮನೆಯಲ್ಲಿಯೇ ಊಟ ಮಾಡುತ್ತಿದ್ದರು. ಅವರು ಮಾಂಸಾಹಾರಿಗಳಾಗಿದ್ದರು. ಬುಡ್ಗ ಜಂಗಮ ಸಮುದಾಯ ಬೇಕಾದರೆ ಸೌಲಭ್ಯ ಪಡೆದುಕೊಳ್ಳಲಿ ಎಂದರು.

ಬೇಡ ಜಂಗಮರು ಅಂದರೆ ಆಂಧ್ರದಿಂದ ವಲಸೆ ಬಂದವರು. ಬೇಡ ಜಂಗಮ, ಬುಡ್ಗ ಜಂಗಮ ಎಂದು ಕೆಲವು ಕಡೆ ಇದ್ದಾರೆ. ಬೇಡ ಎಂದರೆ ಕಾಡಿನಲ್ಲಿ ಬೇಟೆಯಾಡುವವರು. ಊರೂರು ಅಲೆಯುವವರು. ಬುಡ್ಗ ಜಂಗಮ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವರು ಜಾತಿಗಣತಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ. ಶೋಷಿತ ಸಮುದಾಯವನ್ನು ಮುನ್ನಲೆಗೆ ತರಲು ಪ್ರಯತ್ನಿಸಬೇಕೇ ವಿನಃ, ತಳ ಸಮುದಾಯದ ಸೌಕರ್ಯಗಳನ್ನು ಕಸಿಯುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಕಳೆದ ಸುಮಾರು 35 ವರ್ಷಗಳಿಂದ ಮೀಸಲಾತಿ ಪಡೆಯುವುದಕ್ಕಾಗಿ ಹೋರಾಟ ನಡೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿಲ್ಲ. ಇದೀಗ ಒಳ ಮೀಸಲಾತಿ ಘೋಷಣೆ ಮಾಡುವ ಹಿನ್ನೆಲೆ ರಾಜ್ಯದಾದ್ಯಂತ ಜಾತಿಗಣತಿ ನಡೆಯುತ್ತಿದೆ. ಜೂನ್ ತಿಂಗಳಲ್ಲಿ ಒಳಮೀಸಲಾತಿ ಘೋಷಣೆಯಾಗುವ ವಿಶ್ವಾಸವಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡಬಹುದು ಎಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ಮಾದಿಗ ಸಮುದಾಯಕ್ಕೆ ಆಕ್ಸಿಜನ್ ದೊರೆತಂತಾಗಿದೆ. ತೆಲಂಗಾಣ, ಹರಿಯಾಣ, ಆಂಧ್ರಪ್ರದೇಶದಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿ ಪ್ರಕ್ರಿಯೆ ನಡೆದಿದ್ದು, ಕರ್ನಾಟಕದಲ್ಲೂ ಒಳ ಮೀಸಲಾತಿ ಜಾರಿಗೊಳ್ಳುವ ವಿಶ್ವಾಸವಿದೆ. ಒಳಮೀಸಲಾತಿ ಜಾರಿಯಾಗುವ ವರೆಗೂ ಕರ್ನಾಟಕದಲ್ಲಿ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಒತ್ತಾಯಿಸಿದ್ದೇವೆ. ಒಳಮೀಸಲಾತಿ ನೀಡುವುದಕ್ಕಾಗಿ ಜಾತಿಗಣತಿ ನಡೆಯುತ್ತಿದ್ದು, ಜಾತಿಗಣತಿ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಮೀಸಲಾತಿ ಜಾರಿ ಸಂಬಂಧದ ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಹೇಳಿದರು.

ಮಾದಿಗ ಸಮಾಜದವರು ತಮ್ಮ ಮೂಲ ಜಾತಿಯನ್ನು ಸರಿಯಾಗಿ ಬಳಸಬೇಕು. ಕೆಲವು ಕಡೆ ಎಸ್‌ಸಿಗಳು ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮ ಪಾಲಿಸುತ್ತಿದ್ದಾರೆ. ಆದರೆ ಮೂಲ ಜಾತಿ ಹೆಸರು ಬರೆಸಿ, ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಜಾತಿಗಣತಿ ವೇಳೆ ಸಮಗ್ರ ದಾಖಲೆ ನೀಡಬೇಕು. ಒಂದೇ ಒಂದು ಕುಟುಂಬವೂ ಜಾತಿಗಣತಿಯಿಂದ ದೂರ ಉಳಿಯಬಾರದು ಎಂದು ಸಮುದಾಯದವರಿಗೆ ಕರೆ ನೀಡಿದರು.

ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಯುತ್ತಿದ್ದು, ಸರ್ವರ್ ಸಮಸ್ಯೆಯಾಗುತ್ತಿದೆ. ತಾಂತ್ರಿಕ ತೊಂದರೆಗಳ ನಿವಾರಣೆಗೆ ಕ್ರಮ ವಹಿಸಬೇಕು. ಮಾದಿಗ ಸಮುದಾಯದ ಮುಖಂಡರು ಸಮಾವೇಶ, ಉತ್ಸವ, ಸಮಾರಂಭಗಳನ್ನು ಮುಂದೂಡಿ ಜಾತಿ ಸಮೀಕ್ಷೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಎಚ್‌. ಆಂಜನೇಯ ನಿರ್ದೇಶನ ನೀಡಿದರು.

ದಲಿತ ಮುಖಂಡರಾದ ಎ .ಮಾನಯ್ಯ, ಮುಂಡ್ರಗಿ ನಾಗರಾಜ್, ಎಲ್. ಮಾರೆಣ್ಣ, ವೆಂಕಟೇಶ್ ಹೆಗಡೆ, ಎರಕುಲಸ್ವಾಮಿ, ಎಚ್.ಕೆ. ಗಂಗಾಧರ, ಎಚ್. ಸಿದ್ದೇಶ್, ಪೃಥ್ವಿರಾಜ್, ಬಾಪೂಜಿನಗರ ಶಿವರಾಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು. ರಾಹುಲ್‌ಗಾಂಧಿ ಪ್ರಧಾನಿಯಾಗಲಿದ್ದಾರೆ:

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಜಾತಿಗಣತಿ ಆಗಬೇಕು ಎಂದು ಒತ್ತಾಯಿಸಿದ್ದರಿಂದಾಗಿಯೇ ಜನಗಣತಿ ಜತೆಗೆ ಜಾತಿಗಣತಿ ನಡೆಯುತ್ತಿದೆ. ಇದನ್ನು ಪ್ರಧಾನಮಂತ್ರಿಗಳು ಸಹ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ ತಿಳಿಸಿದರು. ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕರಾಗಿದ್ದು, ಮುಂದೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.