ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ/ಕೊಡೇಕಲ್
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳಾದ ಸಾಂಗ್ಲಿ ಮತ್ತು ಕೋಲ್ಹಾಪುರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಇದನ್ನು ತಪ್ಪಿಸಲು ಆಲಮಟ್ಟಿ ಜಲಾಶಯದಿಂದ ಹಾಲಿ ಬಿಡುತ್ತಿರುವ ನೀರಿನ ಪ್ರಮಾಣ ಮತ್ತಷ್ಟೂ ಹೆಚ್ಚಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಆಲಮಟ್ಟಿಗೆ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಸಮಾನಾಂತರ ಜಲಾಶಯವಾದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರಕ್ಕೆ 3ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿದೆ.
ಹೀಗಾಗಿ, ಬಸವ ಸಾಗರ ಜಲಾಶಯದ ನೀರಿನ ಮಟ್ಟ ಕಾಯ್ದಿಟ್ಟುಕೊಂಡು, ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕಳೆದ ಒಂದು ವಾರದಿಂದ ಪ್ರತಿದಿನ 1 ರಿಂದ ಶುಕ್ರವಾರ ಸಂಜೆವರೆಗೆ ಸುಮಾರು 3 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಒಂದು ಅಂದಾಜಿನಂತೆ, ಈ ಹತ್ತು ದಿನಗಳ ಅಂತರದಲ್ಲಿ ಆಲಮಟ್ಟಿಯಿಂದ ಬಸವ ಸಾಗರಕ್ಕೆ 13 ಟಿಎಂಸಿ ನೀರು ಒಳಹರಿವು ಬಂದಿದ್ದು, ಕೃಷ್ಣಾ ನದಿಗೆ ಸುಮಾರು 8.54 ಟಿಎಂಸಿ ಯಷ್ಟು ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.ಇಷ್ಟೊಂದು ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಯಾದಗಿರಿ ಜಿಲ್ಲೆಯ 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಬಾಹ ಭೀತಿ ಎದುರಾಗಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತ ಪ್ರವಾಹಪೂರ್ವ ಸಿದ್ಧತೆಗಳ ನಡೆಸಿದೆ. ಈಗ, ಮಹಾರಾಷ್ಟ್ರದಲ್ಲಿನ ಪರಿಸ್ಥಿತಿಯಿಂದ ಮತ್ತೇ ಹೆಚ್ಚಿನ ನೀರು ಬಿಟ್ಟರೆ ಇಲ್ಲಿಯೂ ಮುಳುಗಡೆ ಭೀತಿ ತಪ್ಪಿಲ್ಲ.
ಈಗಾಗಲೇ ಮಹಾರಾಷ್ಟ್ರದ ಕೋಯ್ನಾ ಆಣೆಕಟ್ಟು ಭರ್ತಿಯಾಗಿದ್ದು, ಅಲ್ಲಿಂದ ನೀರು ಬಿಡಗಡೆ ಮಾಡಬೇಕು. ಇದರಿಂದ ಕೃಷ್ಣಾ ನದಿಯ ಮಟ್ಟ ಹೆಚ್ಚಿಸುತ್ತದೆ. ಒಂದು ವೇಳೆ ಕರ್ನಾಟಕ್ಕೆ ನೀರು ಬಿಡುಗಡೆ ಮಾಡದಿದ್ದಲ್ಲಿ ಕೋಲ್ಹಾಪುರ ಮತ್ತು ಸಾಂಗ್ಲಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜೀತ್ ಪವಾರ್ ಆತಂಕ ವ್ಯಕ್ತಪಡಿಸಿದ್ದಾರೆ.ಮನವಿಗೆ ರಾಜ್ಯ ಸರ್ಕಾರ ಹಾಗೂ ನಿಗಮದ ಅಧಿಕಾರಿಗಳು ಸ್ಪಂದಿಸಿದರೆ, ಆಲಮಟ್ಟಿಯಿಂದ ಇನ್ನಷ್ಟೂ ಪ್ರಮಾಣದ ನೀರು ಬಿಟ್ಟರೆ ಸಹಜವಾಗಿ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಒಳಹರಿವು ಬರಲಿದ್ದು, ಇನ್ನೂ ಕೆಲವು ದಿನಗಳ ಕಾಲ ನದಿಗೆ ನೀರು ಬಿಡಬೇಕಾಗಬಹುದು.
ಬಸವಸಾಗರ ಜಲಾಶಯಕ್ಕೆ 2.75 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವು ಹರಿದು ಬರುತ್ತಿರುವುದರಿಂದ 3 ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಸಂಗ್ರಹಮಟ್ಟ ಕಾಯ್ದುಕೊಂಡು 25 ಕ್ರಸ್ಟ್ ಗೇಟ್‌ಗಳ ಮುಖಾಂತರ ಶುಕ್ರವಾರ ನದಿಗೆ ಹರಿಸಲಾಗುತ್ತಿದೆ.ಪಶ್ಚಿಮಘಟ್ಟಗಳಲ್ಲಿ ಹಾಗೂ ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದಿಂದ ಒಳಹರಿವು ಬರಲಿದ್ದು ಇನ್ನಷ್ಟು ದಿನಗಳವರೆಗೆ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ ಎಂದು ಜಲಾಶಯದ ಅಧಿಕಾರಿಗಳ ಮೂಲ ತಿಳಿಸಿವೆ.
ಈ ನಿಟ್ಟಿನಲ್ಲಿ ನದಿ ತೀರದ ಗ್ರಾಮಗಳ ಜನತೆ ಜಾಗೃತರಾಗಿರಬೇಕಿದೆ. ಈಗಾಗಲೇ ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಪ್ರತಿನಿತ್ಯ ನದಿ ತೀರದ ಗ್ರಾಮಗಳಲ್ಲಿ ನಿಗಾ ವಹಿಸಿದ್ದಾರೆ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿದಿಂದ ಸಹಾಯವಾಣಿ ಆರಂಭವಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾದರೆ ಗ್ರಾಮಸ್ಥರು ಸಂಪರ್ಕಿಸಬಹುದಾಗಿದೆ.ಜಲಾಶಯ ಮಟ್ಟ: 492.252 ಮೀ.ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 490.67 ಮೀ. ತಲುಪಿದ್ದು 26.54 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.