ಸಾರಾಂಶ
ಕೆ.ಆರ್.ಪೇಟೆ: ಒಂದು ದೇಶವನ್ನು ನಾಶಪಡಿಸಲು ಬಾಂಬ್‌ಗಳು ಬೇಕಾಗಿಲ್ಲ. ಯುವ ಜನಾಂಗವನ್ನು ಮಾದಕ ವ್ಯಸನಿಗಳನ್ನಾಗಿಸಿದರೆ ಸಾಕು, ಇಡೀ ರಾಷ್ಟ್ರವೇ ಸರ್ವನಾಶವಾಗುವುದರಲ್ಲಿ ಅನುಮಾನವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ಚನ್ನರಾಯಪಟ್ಟಣ ಜಿಲ್ಲಾ ಅಧ್ಯಕ್ಷ ಆರ್.ಟಿ.ಒ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಪ್ರತಿ ರಾಷ್ಟ್ರಗಳಿಗೂ ಮಾದಕವಸ್ತು ಜಾಲ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದರಲ್ಲಿ ಶ್ರೀಮಂತ, ಬಡ ದೇಶ ಎಂಬ ಭಿನ್ನತೆ ಇಲ್ಲ. ಇದೊಂದು ಕತ್ತಲ ಪ್ರಪಂಚವಾಗಿದ್ದು, ಯುವ ಸಮೂಹ ಜಾಗೃತವಾಗುವ ಅಗತ್ಯವಿದೆ ಎಂದರು.ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿದರೆ ಯುವ ಪೀಳಿಗೆ ಬದುಕು ಸ್ವಾಸ್ಥ್ಯದಿಂದ ಕೂಡಿರುತ್ತದೆ. ಇಂದಿನ ಯುವಜನತೆ ಒಳ್ಳೆಯ ಹವ್ಯಾಸಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರದ ಧರ್ಮಸ್ಥಳ ಯೋಜನಾಧಿಕಾರಿ ತಿಲಕ್ ರಾಜ್ ಮಾತನಾಡಿ, ದುಶ್ಚಟ ಇರುವ ವ್ಯಕ್ತಿಯಿಂದ ಮನೆಯಲ್ಲಿ ಎಲ್ಲರೂ ನರಕಯಾತನೆ ಅನುಭವಿಸಬೇಕಾಗುತ್ತದೆ. ಮದ್ಯಮುಕ್ತ ಸಮಾಜ ನಿರ್ಮಾಣ ಮದ್ಯದಂಗಡಿಗಳನ್ನು ಬಂದ್ ಮಾಡಿದರೆ ಸಾಧ್ಯವಿಲ್ಲ. ಮದ್ಯವ್ಯಸನಿಯ ಮನಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿ ಕಾಲೇಜು ಮಕ್ಕಳಿಗೆ ಮಾದಕ ವಸ್ತು ವಿರೋಧಿ ಬಗ್ಗೆ ಪ್ರತಿಜ್ಞೆ ಬೋಧಿಸಿದರು.ಸಂಪನ್ಮೂಲ ವ್ಯಕ್ತಿ, ವಕೀಲ ಹೊನ್ನೇನಹಳ್ಳಿ ರವಿಕುಮಾರ್, ಪ್ರತಿಯೊಬ್ಬ ನಾಗರಿಕನೂ ಜಾಗೃತಿ ಹೊಂದಿ ವಿಶ್ವವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸುವಂತೆ ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಮೋಹನ್ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಆಸರೆ ಎಚ್.ಬಿ. ಮಂಜುನಾಥ್, ಧರ್ಮಸ್ಥಳ ಸಂಘದ ಮೇಲ್ವಿಚಾರಕಿ ಲಕ್ಷ್ಮೀ, ರಮ್ಯ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.