ಸಾರಾಂಶ
ಬರಗಾಲ ನಿಮಿತ್ತ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ಕಾರಟಗಿಯಲ್ಲಿ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಯಿತು.
ಕಾರಟಗಿ: ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಸ್ಪಂದನೆ ನೀಡಬೇಕು. ಅವಶ್ಯಕತೆ ಇದ್ದಲ್ಲಿ ಹೊಸ ಬೋರ್‌ವೇಲ್ ಗಳನ್ನು ಕೊರೆಸಿ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ನಿಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಬರಗಾಲ ನಿಮಿತ್ತ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನ ಗ್ರಾಮೀಣ ಭಾಗದಲ್ಲಿ ಯಾವುದೇ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಪರಿಶೀಲನೆ ನಡೆಸಿ ತಹಸೀಲ್ದಾರ್ ಕಚೇರಿಗೆ ವರದಿ ಸಲ್ಲಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಸಭೆಯ ನಡವಳಿಯ ವಿಷಯಗಳನ್ನು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ಸದ್ಯ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಕಾಲುವೆಗೆ ನೀರು ಬಿಟ್ಟಿದ್ದು, ಅದನ್ನು ಕೆರೆಯಲ್ಲಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಪ್ರತಿ ದಿನ ಬೆಳಗ್ಗೆ ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ ನೀರಿನ ಸರಬರಾಜು ಕುರಿತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಸಹಾಯವಾಣಿ ಕೂಡಾ ತೆರೆಯಲಾಗಿದೆ. ಯಾರೇ ಕರೆ ಮಾಡಿದರೂ ಸ್ಪಂದನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.ಈ ವೇಳೆ ತಾಪಂ ಅಧಿಕಾರಿಗಳು, ಸಹಾಯಕ ಅಭಿಯಂತರು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ವಿಜಯಕುಮಾರ್, ಪಶು ಸಂಗೋಪನೆ ಸಹಾಯಕ ನಿರ್ದೇಶಕರು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪಿಡಿಒ, ಗ್ರಾಮ ಆಡಳಿತಧಿಕಾರಿಗಳು ಸೇರಿ ಇತರರಿದ್ದರು.