ಮುಖ್ಯಮಂತ್ರಿ ಸ್ಥಾನಪಲ್ಲಟ ಆಗುತ್ತೇ ಅಥವಾ ಆಗಲ್ಲ ಅನ್ನುವುದನ್ನು ಹೇಳಲು ನಾನು ಅವರ ಪಕ್ಷದವನಲ್ಲ ಎಂದು ಎ ಮಂಜು ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಆಗಿದ್ದರೆ ಮಾತಿಗೆ ತಕ್ಕಂತೆ ಡಿ.ಕೆ.ಶಿವಕುಮಾರ್ ಅವರಿಗೆ ಆ ಸ್ಥಾನ ನೀಡುವುದು ಅತ್ಯಂತ ಸೂಕ್ತ ಎಂದು ಅರಕಲಗೂಡು ಶಾಸಕ ಎ.ಮಂಜು ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಮಂಜು, ಮುಖ್ಯಮಂತ್ರಿ ಸ್ಥಾನಪಲ್ಲಟ ಆಗುತ್ತೇ ಅಥವಾ, ಆಗಲ್ಲ ಅನ್ನುವುದನ್ನು ಹೇಳಲು ನಾನು ಅವರ ಪಕ್ಷದವನಲ್ಲ, ನಾನು ಒಬ್ಬ ಶಾಸಕನಾಗಿ ಏನು ನಡಿಯುತ್ತಿದೆ ಅನ್ನುವ ವಿಚಾರಗಳ ಬಗ್ಗೆ ಮಾತನಾಡಬೇಕಷ್ಟೇ ಎಂದು ಹೇಳಿದರು.ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಅಧಿಕಾರ ನೀಡಿದ್ದಾರೆ. ಈಗಾಗಲೇ ಎರಡೂವರೆ ವರ್ಷಗಳು ಕಳೆದಿದ್ದು, ಸಿದ್ದರಾಮಯ್ಯ ಅವರು ಕೂಡ ಮುಖ್ಯ ಮಂತ್ರಿಯಾಗಿ ಎರಡೂವರೆ ವರ್ಷಗಳು ಕಳೆದಿವೆ. ಈಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಎರಡೂವರೆ ವರ್ಷಗಳ ಮಾತು ಕೊಟ್ಟಿರೋದು ಕಾಂಗ್ರೆಸ್ ಹೈಕಮಾಂಡ್, ಎಂ.ಪಿ., ಎಂ.ಎಲ್‌ಎ ಗಳಲ್ಲ, ಹೀಗಾಗಿ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲ, ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ನಡೆದಿದೆ ಎನ್ನಲಾದ ಈ ಮಾತುಕತೆಗೆ ನಿಜವೇ ಆಗಿದ್ದರೆ ಆ ಒಪ್ಪಂದಕ್ಕೆ ತಕ್ಕಂತೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಟ್ಟಲ್ಲಿ ಅವರು ಗ್ರೇಟ್ ಪರ್ಸನ್ ಎಂದು ಹೇಳಿದರು. ಒಪ್ಪಂದದ ಪ್ರಕಾರ ಅಧಿಕಾರ ನೀಡದೇ ಹೋದಲ್ಲಿ ವಿರೋಧ ಪಕ್ಷದವರಾದ ನಮಗೆ ಸಂತೋಷ ಎಂದು ಹಾಸ್ಯಭರಿತವಾಗಿ ಮಂಜು ನುಡಿದರು.
ಸಿದ್ದರಾಮಯ್ಯ ಅವರು ಎಂದಿಗೂ ಮಾತು ತಪ್ಪಿದವರಲ್ಲ, ನಾನು ಹತ್ತಿರದಿಂದ ಸಿದ್ದರಾಮಯ್ಯ ಅವರನ್ನು ಬಲ್ಲವನಾಗಿದ್ದೇನೆ. ಅವರ ಸುತ್ತಮುತ್ತಲು ಇರುವ ಜತೆಗಾರರ ಒತ್ತಡದಿಂದಾಗಿ ಅಧಿಕಾರ ಬಿಟ್ಟುಕೊಡಲು ಹಿಂಜರಿಯುತ್ತಿರಬಹುದು. ಏನೇ ಆದರೂ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಸಂಬಂಧಿತ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ನಮಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಒಂದೇ, ಇಬ್ಬರಿಗೂ ಒಳ್ಳೆಯದಾಗಲಿ ಎಂದೂ ಎ.ಮಂಜು ನುಡಿದರು.ಕೊಡಗಿನಲ್ಲಿ ಈರ್ವರೂ ಶಾಸಕರಿಂದ ಜನಪರ ಕೆಲಸ :
ಕೊಡಗಿನಲ್ಲಿ ಈರ್ವರೂ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಇವರೀರ್ವರ ಬಗ್ಗೆಯೂ ಉತ್ತಮ ಕೆಲಸ ಮಾಡುತ್ತಿರುವ ಜಪ್ರತಿನಿಧಿಗಳು ಎಂಬ ಮಾತು ರಾಜ್ಯಮಟ್ಟದಲ್ಲಿ ವ್ಯಕ್ತವಾಗಿದೆ. ಈ ವರ್ಷ ರಾಜ್ಯವ್ಯಾಪಿ ಮಾತ್ರವಲ್ಲ. ದೇಶದೆಲ್ಲೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ದುರಸ್ಥಿಗೀಡಾಗಿದೆ. ಕೊಡಗಿನಲ್ಲಿಯೂ ರಸ್ತೆ ಹಾಳಾಗಿದೆ. ಆದರೂ ಈರ್ವರೂ ಶಾಸಕರು ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿಗೆ ಮುಂದಾಗಿದ್ದಾರೆ. ಕೊಡಗಿನ ಜನತೆಯಲ್ಲಿಯೂ ಈ ಶಾಸಕರೀರ್ವರ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ. ಪಕ್ಷ ಬೇರೆಯಾಗಿದ್ದರೂ ಅಭಿವೃದ್ಧಿ ಮತ್ತು ಜನರ ಪರವಾಗಿರುವ ರಾಜಕಾರಣಿಗಳ ಉತ್ತಮ ಕೆಲಸವನ್ನು ಸ್ಮರಿಸಲೇಬೇಕೆಂದು ಶಾಸಕ ಎ.ಮಂಜು ನುಡಿದರು.