ಸಾರಾಂಶ
ಕೊಳ್ಳೇಗಾಲದ ನಗರಸಭೆಯಲ್ಲಿ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎಪಿ ಶಂಕರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಿಗ್ರೂಪ್ ನೌಕರ ಪ್ರಭಾಕರ್ ಅವರನ್ನು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಹೊಣೆ ನೀಡಲಾಗಿದ್ದು, ಅವರಿಂದ ಲೋಪವಾಗಿದ್ದರೆ ಸಾರ್ವಜನಿಕರು ಈ ಸಂಬಂಧ ದೂರು ಸಲ್ಲಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎಪಿ ಶಂಕರ್ ತಿಳಿಸಿದರು. ನಗರಸಭೆಯಲ್ಲಿ ಕನ್ನಡಪ್ರಭ ವರದಿಯಲ್ಲಿ ಬಿಲ್ ಕಲೆಕ್ಟರ್ ಲೋಪ, ನಿಯಮ ಮೀರಿ ಆಯುಕ್ತರ ಆದೇಶ, ಸದಸ್ಯೆ ಜಯಮೇರಿ ದೂರು ಸಂಬಂಧ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಪ್ರಭಾಕರ್ ಅವರಿಗಿದೆ. ಹಾಗಾಗಿ ಆಯುಕ್ತರೇ ನೇಮಕಗೊಳಿಸಿದ್ದಾರೆ, ಲೋಪ ಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು. ಯುಜಿಡಿ ಹಸ್ತಾಂತರ ಪ್ರಕ್ರಿಯೆ, ಕಾಮಗಾರಿ ಸಂಬಂಧಿಸಿದ ಚರ್ಚೆ ವಿಚಾರಗಳ ವೇಳೆ ರೇಖಾ ರಮೇಶ್, ಸುಶೀಲ, ಸುಮೇರಾ ಬೇಗಂ ಅವರು ಸದಸ್ಯರಾಗಿಯೇ ಇರಲಿಲ್ಲ. ಆದರೂ ಲೋಕಾಯುಕ್ತದಲ್ಲಿ ವಿನಾಕಾರಣ ಅವರ ಹೆಸರು ಸೇರಿಸಲಾಗಿದೆ. ಯುಜಿಡಿ ಹಗರಣ ಕುರಿತು ಸದಸ್ಯರ ಮೇಲೆ ಜಯಮೇರಿ ಅವರ ದೂರು ದುರುದ್ದೇಶವಾಗಿದ್ದು ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ದೂರು ನೀಡಿದ್ದಾರೆ. ಅಲ್ಲದೆ ಯುಜಿಡಿ ವಿಚಾರ ಪ್ರಕರಣದಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನನಗೆ ಅನುಮತಿ ನೀಡಿದರು ಎಂಬ ಹೇಳಿಕೆ ನೀಡುವ ಮೂಲಕ ಶಾಸಕರು ಮತ್ತು ಸದಸ್ಯರ ನಡುವೆ ಗುಂಪುಗಾರಿಕೆ ಶುರುಮಾಡುವ ತಂತ್ರ ಹಣೆದಿದ್ದಾರೆ. ಈ ಪ್ರಕರಣದಲ್ಲಿ ಶಾಸಕರ ಪಾತ್ರವಿಲ್ಲ, ಜಯಮೇರಿ ಅವರು ಸ್ವಾರ್ಥಕ್ಕಾಗಿ ಶಾಸಕರ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಶಾಸಕರು ಅವರ ವಾರ್ಡ್ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ, ವಾರ್ಡ್ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸೇರಿದಂತೆ ನಾವ್ಯಾರು ಪಕ್ಷಪಾತ ಮಾಡುತ್ತಿಲ್ಲ, ಆದರೂ ಇವರು ಸ್ವಾರ್ಥ ಹಾಗೂ ದ್ವೇಷದಿಂದ ಆರೋಪ ಮಾಡುತ್ತಿದ್ದು ಈ ಬೆಳವಣಿಗೆ ಸರಿಯಲ್ಲ ಎಂದರು.ಸಿಬ್ಬಂದಿ ಉದ್ಧಟತನ, ಲಂಚದ ಬಗ್ಗೆ ಪ್ರಶ್ನಿಸಲೇ ಇಲ್ಲ.!
ಡಿಗ್ರೂಪ್ ನೌಕರ ಪೊಲೀಸರೊಬ್ಬರಿಂದ ಲಂಚಪಡೆದ ಬಗ್ಗೆ ಉದ್ಧಟವಾಗಿ ವರ್ತಿಸುವ ಬಗ್ಗೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು ಪ್ರಶ್ನಿಸುವ ಗೊಡವೆಗೆ ಹೋಗಲಿಲ್ಲ, ಕನ್ನಡಪ್ರಭ ವರದಿಗೆ, ಸ್ಪಷ್ಟನೆ ನೀಡಿ ಎಂದು ಉಪಾಧ್ಯಕ್ಷರು ತಾಕೀತು ಮಾಡುತ್ತಿದ್ದಂತೆ ನಾನು ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನೌಕರ ಸಮರ್ಥಿಸಿಕೊಂಡ ಘಟನೆ ನಡೆಯಿತು.ಕುಡಿದು ಬರುತ್ತೀರಾ?, ಕಚೇರಿ ವೇಳೆ ಕುಡಿಯುವ ಬಗ್ಗೆ ದೂರು:
ಕಚೇರಿ ಸಮಯದ ವೇಳೆ ನೀವು ಕುಡಿದು ಬರುತ್ತೀರಿ ಎಂಬ ದೂರುಗಳಿದ್ದು ಇದಕ್ಕೆ ಉತ್ತರ ಹೇಳಿ ಎಂದು ನಗರಸಭೆ ಉಪಾಧ್ಯಕ್ಷ ಶಂಕರ್, ಮಾಜಿ ಅಧ್ಯಕ್ಷ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಡಿಗ್ರೂಪ್ ನೌಕರನನ್ನು ತರಾಟೆ ತೆಗೆದುಕೊಂಡರು. ಈ ವೇಳೆ ಹಾಜರಿದ್ದ ಕೆಲ ಪತ್ರಕರ್ತರು, ನಗರಸಭೆ ಕೆಲ ಸಿಬ್ಬಂದಿ ಕುಡಿದು ಕಚೇರಿಗೆ ಬರುತ್ತಾರೆ. ಊಟದ ಸಮಯದಲ್ಲೂ ಬಾರ್‌ನಲ್ಲಿ ಕುಡಿಯುತ್ತಾರೆಯೇ ಎಂದು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಮಾಜಿ ಅಧ್ಯಕ್ಷ ರಮೇಶ್ ಅವರು ಸರಿಯಾಗಿ ಉತ್ತರಿಸಿ ಎಂದು ತಾಕೀತು ಮಾಡಿದರು. ಈ ವೇಳೆ ಡಿಗ್ರೂಫ್ ನೌಕರ ಪ್ರಭಾಕರ ಪ್ರತಿಕ್ರಿಯಿಸಿ, ನಾನು ಕುಡಿಯಲ್ಲ, ಆಯುಕ್ತರ ಆದೇಶದ ಮೇರೆಗೆ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ, ಮಂಡ್ಯದಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ಅನುಭವದಿಂದಾಗಿ ಇಲ್ಲೂ ಕೆಲಸ ಮಾಡುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ಸದಸ್ಯ ರಾಘವೇಂದ್ರ, ಮಂಜುನಾಥ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಸ್ತಿಪುರ ರವಿ, ಭೀಮನಗರ ರಮೇಶ ಇನ್ನಿತರರಿದ್ದರು.