ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ದಲಿತರಿಗೆ ಅವಕಾಶ ನೀಡಲೆಂದು ಮಾನವೀಯ ದೃಷ್ಟಿಯಿಂದ ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ದಲಿತ ಸಿಎಂ ಪರ ಧ್ವನಿ ಮೊಳಗಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ದಲಿತರಿಗೆ ಅವಕಾಶ ನೀಡಲೆಂದು ಮಾನವೀಯ ದೃಷ್ಟಿಯಿಂದ ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ದಲಿತ ಸಿಎಂ ಪರ ಧ್ವನಿ ಮೊಳಗಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರಿಗೆ ಒಂದು ಅವಕಾಶ ನೀಡಬೇಕು. ಮಾನವೀಯತೆ ದೃಷ್ಟಿಯಿಂದ ದಲಿತರಿಗೆ ಒಂದು ಸಲ ಮುಖ್ಯಮಂತ್ರಿ ಸ್ಥಾನದ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಅಧಿಕಾರ ಹಂಚಿಕೆ ವಿಷಯದ ಬಗ್ಗೆ ನಾನೇನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಸ್ವಾಭಾವಿಕವಾಗಿ ಊಟಕ್ಕೆ ಕರೆದಿದ್ದರು. ಹಾಗಾಗಿ ಹೋಗಿದ್ದೆವು. ಸ್ವಾಭಾವಿಕವಾಗಿ ಊಟಕ್ಕೆ ಕರೆದರೆ ಹೋಗುತ್ತೇವೆ ಅಷ್ಟೇ ಎಂದು ಅವರು ಡಿನ್ನರ್ ಪಾರ್ಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಸತೀಶ್ ಜಾರಕಿಹೊಳಿಯವರ ಮನೆಗೆ ಊಟಕ್ಕೆ ಹೋಗಿದ್ದ ವೇಳೆ ರಾಜಕೀಯ ವಿಚಾರಗಳೇನೂ ಅಲ್ಲಿ ಚರ್ಚೆಯಾಗಿಲ್ಲ. ನಮ್ಮ ಪಕ್ಷದಲ್ಲಿ ಬಣ ಅಂತೇನೂ ಇಲ್ಲ. ಸ್ಥಳೀಯವಾಗಿರುವ ಸಚಿವರು, ಶಾಸಕರು ಹೊರಗಿನವರು ತಮ್ಮ ಜಿಲ್ಲೆಗೆ ಬಂದಾಗ ಕರೆದು, ಭೋಜನ ಕೂಟ ವ್ಯವಸ್ಥೆ ಮಾಡಿ, ಆಹ್ವಾನಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆಯಲ್ಲಿರುವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಎಲ್ಲಾ ಶಾಸಕರ ಮನೆಗೂ ಹೋಗಿ ಬಂದಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಐದು ವರ್ಷ ಸಿದ್ದರಾಮಯ್ಯ ಅಧಿಕಾರ ನಡೆಸುವ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಅಂತಿಮವಾಗಿ ನಮ್ಮ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರು. ಎಲ್ಲಾ ಸಮುದಾಯಕ್ಕೂ ಮುಖ್ಯಮಂತ್ರಿ ಸ್ಥಾನ ಕೇಳುವ ಹಕ್ಕು ಇದೆ. ದಲಿತ ಸಿಎಂಗಾಗಿ ನಾವು ಮಾನವೀಯತೆ ದೃಷ್ಟಿಯಿಂದ ಒಂದು ಮನವಿ ಮಾಡುತ್ತಿದ್ದೇವೆ. ದಲಿತರಿಗೆ ಸಿಎಂ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಾಗ ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಿ ಎನ್ನಬಹದು. ಆದರೆ, ಈಗ ಅಂತಹ ಸಂದರ್ಭವಿಲ್ಲ. ಅದನ್ನು ಕೊಡುವುದು, ಬಿಡುವುದು ಎಲ್ಲಾ ನಮ್ಮ ಹೈಕಮಾಂಡ್‌ಗೆ ಬಿಟ್ಟಿದ್ದು. ಹೈಕಮಾಂಡ್ ನಿರ್ಣಯಕ್ಕೆ ನಾವು ಯಾರೂ ಸಹ ಚಕಾರ ಎತ್ತುವುದಿಲ್ಲ. ಸಂಪುಟ ಪುನಾಚರಣೆ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಹೇಳಿದರು.
ಮರ್ಯಾದಾ ಹತ್ಯೆಗೆ ತೀವ್ರ ಆಕ್ರೋಶಇನಾಂ ವೀರಾಪುರದ ಮರ್ಯಾದಾ ಹತ್ಯೆಯಂತಹ ಘಟನೆ ನಡೆದಿರುವುದು, ಇಂತಹ ಆಧುನಿಕ ಯುಗದಲ್ಲೂ ಇದೆಲ್ಲಾ ನಡೆಯುತ್ತಿರುವುದು ಖಂಡನೀಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳಲು ಎಲ್ಲಾ ರೀತಿಯ ಅವಕಾಶಗಳೂ ಇರುತ್ತವೆ. ಸಂಬಂಧಿಸಿದ ಪೊಲೀಸ್ ಠಾಣೆಗೆ ಮನವಿ ಮಾಡಿಕೊಳ್ಳಲು ಅವಕಾಶವೂ ಇರುತ್ತದೆ. ಆದರೆ, ಈ ರೀತಿ ಒಂದು ಅಮೂಲ್ಯ ಜೀವವನ್ನೇ ತೆಗೆಯುವುದು ಖಂಡನೀಯ ಎಂದರು.ರಾಜ್ಯದಲ್ಲಿ ಮರ್ಯಾದಾ ಹತ್ಯೆಯಂತಹ ಘಟನೆಗಳು ನಡೆಯಬಾರದು. ಆರೋಪಿಗಳು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.