ಸಾರಾಂಶ
ಯಲ್ಲಾಪುರ ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುವ ಶಿಲಾಮಯ ದೇವಾಲಯ ಕಟ್ಟಡದ ಶಿಲಾನ್ಯಾಸವನ್ನು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೆರವೇರಿಸಿದರು.
ಯಲ್ಲಾಪುರ: ಯಾರು ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಒಳ್ಳೆಯತನ ಹೊಂದಿರುತ್ತಾರೆಯೋ ಅವರೊಳಗೆ ದೇವರೂ ಕೂಡಾ ಸದಾ ನೆಲೆಯಾಗಿರುತ್ತಾನೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುವ ಶಿಲಾಮಯ ದೇವಾಲಯ ಕಟ್ಟಡದ ಶಿಲಾನ್ಯಾಸ ನೆರವೇರಿಸಿ, ದೇವಾಲಯದ ನಿವೇದನಾ ಪತ್ರ ಬಿಡುಗಡೆಗೊಳಿಸಿ, ಹಿರಿಯರನ್ನು ಗೌರವಿಸಿ ಅವರು ಆಶೀರ್ವಚನ ನೀಡಿದರು. ಯಡಳ್ಳಿಯ ದೇವಾಲಯದಲ್ಲಿ ಇಷ್ಟು ದಿನ ಮೃಣ್ಮಯನಾಗಿ ನೆಲೆಗೊಂಡಿದ್ದ ದೇವರು, ಇನ್ನುಮುಂದೆ ಚಿನ್ಮಯನಾಗಿ ದೇವಾಲಯದಲ್ಲಿ ರಾರಾಜಿಸುತ್ತಾನೆ. ಹೊರಗೆ ಶಿಲಾಮಯನಾಗಿ ಕಾಣಿಸುವ ದೇವರು ಒಳಗೆ ಶೀಲಮಯನಾಗಿ ನೆಲೆಗೊಳ್ಳುತ್ತಾನೆ ಎಂದರು.ಹಿರಿಯರಾದ ಗೊಣಸರಮನೆಯ ಸರ್ವೇಶ್ವರ ಹೆಗಡೆ, ನಾರಾಯಣ ಶಾಸ್ತ್ರಿ, ಪರಮೇಶ್ವರ ಶಾಸ್ತ್ರಿ, ಕುಂದೂರಿನ ಕೃಷ್ಣ ಜೋಶಿ ಮತ್ತು ಗಣಪಾ ಸಿದ್ದಿ, ದುರ್ಗಾ ದೇವಡಿಗ ಯಡಳ್ಳಿ ಅವರನ್ನು ಶ್ರೀಗಳು ಸನ್ಮಾನಿಸಿದರು. ವೇ.ಮೂ. ನಾಗೇಂದ್ರ ಭಟ್ಟ ಹಿತ್ಲಳ್ಳಿ, ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ, ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ, ವೇ.ಮೂ. ಗಣಪತಿ ಭಟ್ಟ ಹಿರೇ, ಎಂಜಿನಿಯರ್ ವಸಂತ ಭಟ್ಟ ಉಪಸ್ಥಿತರಿದ್ದರು.
ಅಶೋಕ ಭಟ್ಟ ಮತ್ತು ಸತ್ಯನಾರಾಯಣ ಜೋಶಿ ಅವರ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಾಣಿ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಮಂಜುನಾಥ ಭಟ್ಟ ಮತ್ತು ಸತ್ಯನಾರಾಯಣ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ಕಾರ್ಯದರ್ಶಿ ಎಂ.ಕೆ. ಭಟ್ಟ ಯಡಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೇದನಾ ಪತ್ರವನ್ನು ಶಿವಕುಮಾರ ಭಟ್ಟ ವಾಚಿಸಿದರು. ವೇದಿಕೆಗೆ ಆಗಮಿಸಿದ ಶ್ರೀಗಳನ್ನು ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.