ಸಾರಾಂಶ
ಬಳ್ಳಾರಿ: ನೈತಿಕತೆ ಇದ್ದರೆ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿ ವಿಚಾರಣೆ ಎದುರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಆಗ್ರಹಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 4 ದಶಕಗಳ ರಾಜಕೀಯ ಜೀವನದಲ್ಲಿ ತಾವು ಅತ್ಯಂತ ಪರಿಶುದ್ಧರು ಎಂಬಂತೆಯೇ ವರ್ತಿಸುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ 106 ಪ್ರಕರಣಗಳಿವೆ. ಈ ಪೈಕಿ 65 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ಈ ಹಿಂದೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಲು ಕಾರಣವಾದರು. ಇದೀಗ ಮುಡಾ ಪ್ರರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಭಂಡತನದಿಂದ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ದೂರಿದರು.ಈ ಹಿಂದೆ ಇಂಥದ್ದೇ ಪ್ರಕರಣದಲ್ಲಿ ಆರೋಪ ಬಂದಾಗ ಯಡಿಯೂರಪ್ಪ ಅವರು ರಾಜಿನಾಮೆ ನೀಡಿ ವಿಚಾರಣೆ ಎದುರಿಸಿದರು. ಸಂವಿಧಾನದ ಮೌಲ್ಯ, ನಂಬಿಕೆ ಉಳಿಸಲು ಸಿದ್ದರಾಮಯ್ಯ ಅವರೇ ಮುಂದಾಗಬೇಕು. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಪಾರದರ್ಶಕ ತನಿಖೆಗೆ ಆಸ್ಪದ ಮಾಡಿಕೊಡಬೇಕು. ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿ. ನಮಗ್ಯಾವ ತಕರಾರಿಲ್ಲ. ಆದರೆ, ಒಂದು ಗಂಭೀರವಾದ ಪ್ರಕರಣದ ಆರೋಪ ಹೊತ್ತಿರುವಾಗ ಅಧಿಕಾರದಲ್ಲಿ ಹೇಗೆ ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದರು.
ಬಳ್ಳಾರಿ ಅಭಿವೃದ್ಧಿ ಶೂನ್ಯ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಬಳ್ಳಾರಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಯಾವುದೇ ಪ್ರಗತಿದಾಯಿಕ ಕೆಲಸಗಳು ನಡೆಯುತ್ತಿಲ್ಲ. ಜಿಲ್ಲೆಗೆ ಉಸ್ತುವಾರಿ ಸಚಿವರು ಇಲ್ಲದೆ ಅನಾಥವಾಗಿದೆ. ಜಮೀರ್ ಅಹ್ಮದ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಆದರೆ, ಈ ವರೆಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಹ ಅವರಿಗೆ ಸಾಧ್ಯವಾಗಿಲ್ಲ. ಜಿಲ್ಲೆಯ ಪ್ರಗತಿಗೆ ಜಿಲ್ಲೆಯ ಶಾಸಕರಿಗೆ ಕಾಳಜಿ ಇಲ್ಲ. ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿ ಮಾರಾಟ ಮಾಡುವ ದೊಡ್ಡ ದಂಧೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವವರಿಲ್ಲ. ಇಸ್ಪೀಟ್, ಜೂಜಾಟ, ಅಕ್ರಮ ಗಾಂಜಾ ಮಾರಾಟ ಹೀಗೆ ನಾನಾ ದಂಧೆಗಳು ನಿರಾತಂಕವಾಗಿ ನಡೆದಿದ್ದರೂ ನಿಯಂತ್ರಿಸುವವರಿಲ್ಲವಾಗಿದೆ. ಡೆಂಘೀ ಸೇರಿದಂತೆ ನಾನಾ ಕಾಯಿಲೆಗಳಿಂದ ಜನರು ತತ್ತರಿಸುತ್ತಿದ್ದು, ಈ ಬಗ್ಗೆ ಗಮನ ಹರಿಸುವವರಿಲ್ಲ ಎಂದು ದೂರಿದರು.ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ಮಾತನಾಡಿ, ಮುಡಾ ಪ್ರಕರಣದ ಆರೋಪ ಹೊತ್ತಿರುವ ಸಿಎಂ ಸಿದ್ಧರಾಮಯ್ಯ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿ. ನಾಗೇಂದ್ರ ಹಾಗೂ ಹಿಂಬಾಲಕರು ಪರಿಶಿಷ್ಟರಿಗೆ ಸೇರಿದ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಪರಿಶಿಷ್ಟರ ಹಣ ಲೂಟಿ ಪ್ರಕರಣದಲ್ಲಿ ನಾಗೇಂದ್ರ ಅವರ ಹಿಂಬಾಲಕರ ಅನೇಕರ ಹೆಸರು ಬಯಲಾಗಿಲ್ಲ ಎಂದು ರಾಮಲಿಂಗಪ್ಪ ಆರೋಪಿಸಿದರು.ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೋಮನಗೌಡ, ಮಲ್ಲೇಶ್ ಕುಮಾರ್ ಕೆ., ಯುವ ಮೋರ್ಚಾ ಅಧ್ಯಕ್ಷ ರಘು ಸುದ್ದಿಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))