ಸಾರಾಂಶ
ಧಾರವಾಡ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸುವಂತೆ ಆತ್ಮಸ್ಥೈರ್ಯ ತುಂಬಲು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್, ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರ ವಿದ್ಯಾಥಿರ್ಗಳಿಗೆ ಅತ್ಯುಪಯುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಧಾರವಾಡದ ಅಧ್ಯಯನ ಕೇಂದ್ರ ಹಾಗೂ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ "ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ " ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಿಷನ್ ವಿದ್ಯಾಕಾಶಿ ಹೆಸರಿನಡಿ ಶಿಕ್ಷಣ ಇಲಾಖೆಯು ಸಾಕಷ್ಟು ಶೈಕ್ಷಣಿಕ ಮಾಹಿತಿಯನ್ನು ಮಕ್ಕಳಿಗೆ ಮುಟ್ಟಿಸಿದೆ. ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ, ಫಲಿತಾಂಶ ಸುಧಾರಣೆಗೆ ಪೂರಕವಾಗಿ ಕನ್ನಡಪ್ರಭ ಎರಡು ವರ್ಷಗಳಿಂದ ಶ್ರಮಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದೆ ಎಂದರು.
ಸಮಾಜದಲ್ಲಿ ಶಿಕ್ಷಣವಿಲ್ಲದಿದ್ದರೆ ಭವಿಷ್ಯವಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಎದುರಾಗುವ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಎಲ್ಲರೂ ಹೆಚ್ಚಿನ ಅಂಕಗಳೊಂದಿಗೆ ಪಾಸಾಗಬೇಕು ಎಂದು ಸವಾಲುಗಳನ್ನು ಎದುರಿಸುವ ಕುರಿತ ಹಲವು ಕಥೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿದರು.ಬಹಳಷ್ಟು ವಿದ್ಯಾರ್ಥಿಗಳಿಗೆ ಓದಿದ್ದು ನೆನಪಿನಲ್ಲಿ ಉಳಿಯೋದಿಲ್ಲ. ಓದುವಾಗ ಸಿನೆಮಾ, ಮೊಬೈಲ್, ಬೇಡವಾದ ವಿಚಾರ ಮಾಡಬಾರದು. ನಿಮ್ಮ ಏಕಾಗ್ರತೆಯನ್ನು ಓದಿನ ಕಡೆಗೆ ತಿರುಗಿಸಬೇಕು. ಗಟ್ಟಿ ನಿರ್ಧಾರದೊಂದಿಗೆ ಪರೀಕ್ಷೆ ಎದುರಿಸಬೇಕು. ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಇರಲಿ. ಬಡತನ, ಅನಾರೋಗ್ಯ ಇವ್ಯಾವು ಓದಿನ ಹಿನ್ನಡೆಗೆ ಕಾರಣವಾಗಲ್ಲ. ಹೆಚ್ಚಿನ ಏಕಾಗ್ರತೆಯಿಂದ ಓದಿ ಉತ್ತಮ ಸಾಧನೆ ಮಾಡಬೇಕು ಎಂದರು.
ಬಿ ಪಾಸಿಟಿವ್ವಿಶೇಷ ಅತಿಥಿಗಳಾಗಿದ್ದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಎಷ್ಟು ಓದಿದ್ದೇವೆ ಎನ್ನುವುದಕ್ಕಿಂತ ಎಷ್ಟು ನೆನಪಿಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುಮಾರು 1 ಲಕ್ಷ ಜಿಬಿ ಮೆಮೋರಿ ಸಾಮರ್ಥ್ಯವಿದೆ. ಈ ಮೆಮೋರಿ ಸಮರ್ಥವಾಗಿ ಬಳಸಿಕೊಂಡು ಏನು ಬೇಕಾದರೂ ಸಾಧನೆ ಮಾಡಬಹುದು. ಅಂತಹ ಅದ್ಭುತ ಶಕ್ತಿ ನಿಮ್ಮಲ್ಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಒಂದು ವಿಷಯವನ್ನು ನಾವು ಹೇಗೆ? ಎಷ್ಟು ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಪರೀಕ್ಷೆ ಎದುರಿಸುವಾಗ ಒಂದು ಪ್ರಶ್ನೆಯನ್ನು ಸರಿಯಾಗಿ ತಿಳಿದುಕೊಂಡು ಉತ್ತರ ಬರೆಯಬೇಕು. ನಿಮ್ಮಲ್ಲಿರುವ ನಕಾರಾತ್ಮಕ ಅಂಶವನ್ನು ಮೊದಲು ಹೊರಹಾಕಿ ಎಂದು ಹೇಳಿ ದೇಹದ ಅಂಗಗಳ ಕಾರ್ಯಾಚರಣೆ ಹಾಗೂ ಗಣಿತದ ಬಗ್ಗೆ ಚಿತ್ರಸಮೇತ ವಿವರ ನೀಡಿದರು.ಓದಿ, ಬರೆದು ತೆಗೆದಾಗ ವಿಷಯ ತಲೆಯಲ್ಲಿ ಉಳಿಯುತ್ತದೆ. ಯೋಜನೆ, ನಿರ್ಧಾರ, ಬರವಣಿಗೆ ನಿಮ್ಮ ಜೀವನ ನಿರ್ಧರಿಸುತ್ತದೆ. ಭಾವನೆಯೊಂದಿಗೆ ಓದಿದಾಗ ಆ ಅಂಶ ನಿಮ್ಮ ಮನಸ್ಸಲ್ಲಿ ಉಳಿಯುತ್ತದೆ ಎಂದು ಸಲಹೆ ನೀಡಿದರು. ಮಕ್ಕಳಿಗೆ ಸಾಕಷ್ಟು ಉದಾಹರಣೆಗಳ ಮೂಲಕ ನಗೆಗಡಲಲ್ಲಿ ತೇಲಿಸಿ ಗಣಿತ, ವಿಜ್ಞಾನದ ವಿಷಯದ ಕುರಿತು ಬೋಧನೆ ಮಾಡಿದರು.
ಶಿಸ್ತು ಶಿಕ್ಷಣದ ಅಡಿಪಾಯಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಮಕ್ಕಳಲ್ಲಿ ಶಿಕ್ಷಕರು ಮೊದಲು ಶಿಸ್ತು ಬೆಳೆಸಬೇಕು. ಅದೇ ಶಿಕ್ಷಣದ ಅಡಿಪಾಯ. ಮನಸ್ಸು ಕೊಟ್ಟು, ಶ್ರದ್ಧೆಯಿಂದ ಓದುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಪರೀಕ್ಷಗೆ ಕುಳಿತಾಗ ಭಯಬಿಟ್ಟು ಓದಿದ್ದನ್ನು ಬರೆಯಬೇಕು. ನೋಡಿದ ಒಂದು ಸಿನೆಮಾದ ಹಾಡು, ದೃಶ್ಯ ನೆನಪಿಡಬಹುದಾದರೆ ಓದಿದ್ದು, ಯಾಕೆ ಸಾಧ್ಯವಿಲ್ಲ ಎನ್ನುವುದನ್ನು ವಿದ್ಯಾರ್ಥಿಗಳು ಪ್ರಶ್ನಿಸಿಕೊಳ್ಳಬೇಕು ಎಂದರು.ಕನ್ನಡಪ್ರಭ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ, ಶಿಕ್ಷಣ ತಜ್ಞ ವಿನಾಯಕ ಜೋಶಿ ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು.ಪರೀಕ್ಷೆ - ಓದಿದವರಿಗೆ ಹಬ್ಬ, ಓದದವರಿಗೆ ಮಾರಿ ಹಬ್ಬ..
ಸಂಪನ್ಮೂಲ ವ್ಯಕ್ತಿ ರಾಜ್ಯ ಮುಕ್ತ ವಿವಿ ಸಂಯೋಜನಾಧಿಕಾರಿ ನಾಗರಾಜ ಎಚ್.ಎನ್. ಎಸ್ಸೆಸ್ಸೆಲ್ಸಿ ಘಟ್ಟದಲ್ಲಿರುವ ಮಕ್ಕಳನ್ನು ಸಮಾಜ ಗಮನಿಸುತ್ತಿರುತ್ತದೆ. ಶ್ರದ್ಧೆಯಿಂದ ಓದಿದರೆ ಟಾಪರ್ ಆಗಿ ಹೊರಹೊಮ್ಮಲು ಸಾಧ್ಯ. ಪರೀಕ್ಷೆ ಎಂದರೆ ಓದಿದವರಿಗೆ ಹಬ್ಬ, ಓದದವರಿಗೆ ಮಾರಿಹಬ್ಬ. ಪರೀಕ್ಷೆಯನ್ನು ಸಮಾಧಾನದಿಂದ ಎದುರಿಸಿ ಶಾಂತತೆಯಿಂದ ಬರೆದು ಯಶಸ್ವಿಯಾಗಬೇಕು.ಪರೀಕ್ಷೆಗೆ 35 ದಿನಗಳು ಮಾತ್ರ ಉಳಿದಿದ್ದು, ಎಲ್ಲ ವಿಷಯಗಳತ್ತ ಸರಿಯಾಗಿ ಚಿತ್ತ ನೆಟ್ಟು ಓದಬೇಕು. ಓದು, ಬರಹ ಎಂಬ ಎರಡೂ ಕೌಶಲ್ಯಗಳನ್ನು ಕರಗತ ಮಾಡಿಕೊಂಡರೆ ಯಶಸ್ಸು ನಿಮ್ಮ ಬೆನ್ನಹಿಂದೆ ಸುತ್ತಲಿದೆ. ಓದುವುದು, ಅದನ್ನು ಅರ್ಥ ಮಾಡಿಕೊಳ್ಳುವುದು, ಪ್ರಮುಖ ವಿಷಯದ ಕೆಳಗೆ ಗೆರೆ ಹಾಕುವುದು, ಕೀ ನೋಟ್ಸ್, ಪುನರಾವಲೋಕನ ಅಗತ್ಯ. ಮೌಲ್ಯಮಾಪಕರಿಗೆ ಅರ್ಥವಾಗುವಂತೆ ಬರೆಯುವುದು ಸಹ ಒಂದು ಕಲೆಯಾಗಿದ್ದು, ಇದರಿಂದ ಹೆಚ್ಚಿನ ಅಂಕ ಪಡೆಯಬಹುದು. ಅಕ್ಷರ-ಪದ- ವಾಕ್ಯ ದೋಷವಿರಬಾರದು. ಆಕರ್ಷಕ ಬರವಣಿಗೆ ಇದ್ದರೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದು ಎಂದು ಸಲಹೆ ನೀಡಿದರು.
ಪರೀಕ್ಷೆ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು, ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡು ಸಮಯ ನಿರ್ವಹಣೆಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕು ಎಂದ ನಾಗರಾಜ್ ಅವರು, ಇದೇ ಸಂದರ್ಭದಲ್ಲಿ "ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಾವು ಟಾಪರ್ ಆಗಿ ಹೊರಹೊಮ್ಮುತ್ತೇವೆ " ಎನ್ನುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.ಹೆಚ್ಚಿದ ಸಾಮಾಜಿಕ ಹೊಣೆಗಾರಿಕೆ
ಈ ಹಿಂದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು ಮಾಧ್ಯಮ, ಪತ್ರಿಕೆಗಳ ಜವಾಬ್ದಾರಿಯಾಗಿತ್ತು. ಪ್ರಸ್ತುತ ಮಾಧ್ಯಮಗಳಿಗೂ ಸಾಮಾಜಿಕ ಹೊಣೆಗಾರಿಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡಪ್ರಭ- ಏಷಿಯಾನೆಟ್ ಸುವರ್ಣ ನ್ಯೂಸ್ ಕಳೆದ ಆರು ವರ್ಷಗಳಿಂದ ಬೃಹತ್ ಚಿತ್ರಕಲೆ ಸ್ಪರ್ಧೆ ಸೇರಿದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಕಾರ್ಯಾಗಾರ, ಎಲೆಮರೆಯಲ್ಲಿ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಮಾಡುತ್ತಿವೆ.ಮಲ್ಲಿಕಾರ್ಜುನ ಸಿದ್ದಣ್ಣವರ, ಬ್ಯುರೋ ಮುಖ್ಯಸ್ಥರು