ತಾಕತ್ತಿದ್ದರೆ ಮನೆಗಳ ಮೇಲಿನ ಧ್ವಜ ‘ಕೈ’ ಇಳಿಸಲಿ: ಡಾ.ಎಸ್.ಎನ್.ಇಂದ್ರೇಶ್ ಸವಾಲು

| Published : Feb 04 2024, 01:31 AM IST

ತಾಕತ್ತಿದ್ದರೆ ಮನೆಗಳ ಮೇಲಿನ ಧ್ವಜ ‘ಕೈ’ ಇಳಿಸಲಿ: ಡಾ.ಎಸ್.ಎನ್.ಇಂದ್ರೇಶ್ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಹನುಮನ ಶಕ್ತಿ ರಾಜ್ಯಾದ್ಯಂತ ಹೇಗೆ ವಿಸ್ತರಣೆಯಾಗಲಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಕಾದುನೋಡಲಿ. ಸಿದ್ದರಾಮಯ್ಯನವರು ಕುಂಕುಮ ಇಟ್ಟುಕೊಳ್ಳದಿರಬಹುದು, ಕೇಸರಿ ಶಾಲು ಹಾಕಿಕೊಳ್ಳದಿರಬಹುದು. ಆದರೆ, ಜನರಿಗೆ ದೇವರ ಮೇಲಿರುವ ಭಕ್ತಿ, ನಂಬಿಕೆ, ಭಾವನೆಯನ್ನು ಯಾರಿಂದಲೂ ದೂರಮಾಡಲಾಗುವುದಿಲ್ಲ. ಕೆರಗೋಡಿನ ತಾಯಂದಿರು ಅವರೇ ಮುಂದೆ ಬಂದು ಧ್ವಜ ಪಡೆದು ಭಕ್ತಿಯಿಂದ ಪೂಜೆ ಸಲ್ಲಿಸಿ ಅವರೇ ಕಟ್ಟುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್ ಸರ್ಕಾರದಿಂದ ಒಂದೇ ಒಂದು ಧ್ವಜ ಇಳಿಸಲು ಮಾತ್ರ ಸಾಧ್ಯವಾಗಿದೆ. ಹಿಂದೂ ಕಾರ್ಯಕರ್ತರು ಲಕ್ಷಾಂತರ ಮನೆಗಳ ಮೇಲೆ ಧ್ವಜ ಕಟ್ಟುತ್ತಾರೆ ಎನ್ನುವುದಕ್ಕೆ ಇವತ್ತಿನ ಅಭಿಯಾನ ಸಾಕ್ಷಿಯಾಗಿದೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಇಳಿಸಲಿ ನೋಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಸವಾಲು ಹಾಕಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮನೆ ಮನೆಗೆ ಧ್ವಜ ಹಂಚಿಕೆ ಅಭಿಯಾನ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕೆರಗೋಡಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಇಡೀ ಜಿಲ್ಲೆ, ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು. ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಬಾವುಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇಂದು ಸಾಂಕೇತಿಕವಾಗಿ ಚಾಲನೆ ಕೊಟ್ಟಿದ್ದೇವಷ್ಟೇ ಎಂದರು.

ಹನುಮನ ಶಕ್ತಿ ರಾಜ್ಯಾದ್ಯಂತ ಹೇಗೆ ವಿಸ್ತರಣೆಯಾಗಲಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಕಾದುನೋಡಲಿ. ಸಿದ್ದರಾಮಯ್ಯನವರು ಕುಂಕುಮ ಇಟ್ಟುಕೊಳ್ಳದಿರಬಹುದು, ಕೇಸರಿ ಶಾಲು ಹಾಕಿಕೊಳ್ಳದಿರಬಹುದು. ಆದರೆ, ಜನರಿಗೆ ದೇವರ ಮೇಲಿರುವ ಭಕ್ತಿ, ನಂಬಿಕೆ, ಭಾವನೆಯನ್ನು ಯಾರಿಂದಲೂ ದೂರಮಾಡಲಾಗುವುದಿಲ್ಲ. ಕೆರಗೋಡಿನ ತಾಯಂದಿರು ಅವರೇ ಮುಂದೆ ಬಂದು ಧ್ವಜ ಪಡೆದು ಭಕ್ತಿಯಿಂದ ಪೂಜೆ ಸಲ್ಲಿಸಿ ಅವರೇ ಕಟ್ಟುತ್ತಿದ್ದಾರೆ. ಜನರ ಮನಸ್ಸಿನಲ್ಲಿರುವ ಭಕ್ತಿ, ಭಾವನೆಗೆ ಇದೇ ಸಾಕ್ಷಿ. ಹಿಂದೂ ಧರ್ಮದಲ್ಲಿ ಹಿರಿಯರು ಉತ್ತಮವಾದ ಸಂಸ್ಕಾರ ಕಲಿಸಿದ್ದಾರೆ. ಅದರಿಂದಲೇ ಜನರಿಂದ ಧ್ವಜ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಎಂದು ಡಾ.ಇಂದ್ರೇಶ್ ತಿಳಿಸಿದರು.

ನಿಷೇಧಾಜ್ಞೆ ಮುಂದುವರಿಕೆ: ಪರಿಸ್ಥಿತಿ ಬೂದಿಮುಚ್ಚಿದ ಕೆಂಡಧ್ವಜ ವಿವಾದದ ಕೇಂದ್ರವಾಗಿರುವ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕಳೆದ ಆರು ದಿನಗಳಿಂದ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಶನಿವಾರವೂ ಮುಂದುವರೆಸಿದೆ. ಮೇಲ್ನೋಟಕ್ಕೆ ಗ್ರಾಮ ಸಹಜ ಸ್ಥಿತಿಗೆ ಕಂಡುಬಂದಂತೆ ಗೋಚರಿಸುತ್ತಿದ್ದರೂ ಪರಿಸ್ಥಿತಿ ಮಾತ್ರ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.ಗ್ರಾಮದಲ್ಲಿ ಜನಜೀವನ ಮಾಮೂಲಿನಂತಿದೆ. ವರ್ತಕರು ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ವಾಹನಗಳ ಸಂಚಾರ ಎಂದಿನಂತಿದೆ. ಶಾಲಾ-ಕಾಲೇಜುಗಳು ಮಾಮೂಲಿನಂತೆ ನಡೆಯುತ್ತಿವೆ. ಆದರೂ ಧ್ವಜ ವಿವಾದದಿಂದ ಉಂಟಾಗಿರುವ ಬಿಗುವಿನ ಪರಿಸ್ಥಿತಿ ತಿಳಿಯಾಗಿಲ್ಲ. ಎಲ್ಲರೂ ಹನುಮಧ್ವಜದ ಪರವಾಗಿಯೇ ಮಾತನಾಡುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ದಿಕ್ಕು ತೋಚದಂತಾಗಿದೆ.ಈಗಾಗಲೇ ಧ್ವಜಸ್ತಂಭ ತೆರವು ಆದೇಶ ಹೊರಬಿದ್ದಿರುವ ವಿಷಯ ತಿಳಿದಿರುವ ಗ್ರಾಮಸ್ಥರು ಮತ್ತಷ್ಟು ಜಾಗೃತರಾಗಿದ್ದಾರೆ. ಧ್ವಜಸ್ತಂಭ ತೆರವಿಗೆ ಮುಂದಾದರೆ ಇನ್ನಷ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಧ್ವಜಸ್ತಂಭ ಸಹಿತ ಗ್ರಾಪಂ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ಜಿಲ್ಲಾಡಳಿತ ಆಲೋಚನೆ ನಡೆಸುತ್ತಿದ್ದರೂ ಆ ಪ್ರಕ್ರಿಯೆ ನಡೆಸುವುದಕ್ಕೂ ಹಿಂದೇಟು ಹಾಕುತ್ತಿದೆ.ದಿನದಿಂದ ದಿನಕ್ಕೆ ಪರಿಸ್ಥಿತಿ ತಿಳಿಯಾಗಬಹುದೆಂದು ಜಿಲ್ಲಾಡಳಿತ ಭಾವಿಸುತ್ತಿದ್ದರೂ ನಿರೀಕ್ಷೆಯಂತೆ ಬೆಳವಣಿಗೆಗಳಾಗುತ್ತಿಲ್ಲ. ಇತ್ತ ಬಿಜೆಪಿಯವರು ಧ್ವಜ ಅಭಿಯಾನ ಆರಂಭಿಸಿರುವುದು ಇನ್ನಷ್ಟು ತಲೆನೋವು ತಂದಿದೆಇದರ ನಡುವೆ ಧ್ವಜಸ್ತಂಭದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಧ್ವಜಸ್ತಂಭದ ಬಳಿಗೆ ಯಾರೂ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ.