ಸಾರಾಂಶ
ಹರಪನಹಳ್ಳಿ: ಯಾವುದೇ ಚುನಾವಣೆಯಲ್ಲಿ ಒಗ್ಗಟ್ಟು ಇದ್ದಲ್ಲಿ ಸಾಧನೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಸ್ಥಳೀಯ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವನ್ನು ಪಡೆದುಕೊಂಡಿರುವುದೇ ಸಾಕ್ಷಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಕಾಶಿಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರಿಗೆ ಸನ್ಮಾನ ಹಾಗೂ ಪಿಕಾರ್ಡ್ ಬ್ಯಾಂಕ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪಕ್ಷಕ್ಕಿಂತ ವ್ಯಕ್ತಿನಿಷ್ಠೆ ಏನೂ ಅಲ್ಲ. ಅದರಲ್ಲೂ ಕಾರ್ಯಕರ್ತರು ಹಾಗೂ ಮತದಾರರು ಅಭಿಮಾನಿ ದೇವರಿದ್ದಂತೆ. ಅವರು ಇಲ್ಲದೇ ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಬಹುಮತ ಸಾಬೀತುಪಡಿಸಿ, ಗೆಲವು ಸಾಧಿಸಿ ಮುಂದೆ ಬಂದಿದ್ದೇವೆ. ಈಗ ಒಗ್ಗೂಡಿ ಕೆಲಸ ಮಾಡಿದ್ದರಿಂದ ಹೆಚ್ಚಿನ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ಪಕ್ಷ ಮುಖ್ಯ ಎನ್ನುವುದು ಮರೆಯಬಾರದು. 182 ಹಳ್ಳಿಗಳಿಗೂ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಹಂತ ಹಂತವಾಗಿ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಂಘಟನೆ, ಪಕ್ಷಕ್ಕೆ ನಿಷ್ಠೆ, ಸಾಮಾಜಿಕ ಬದ್ಧತೆ ಇದ್ದಲ್ಲಿ ಹೋರಾಟದ ಕಿಚ್ಚು ಇರುತ್ತದೆ. ಇತ್ತೀಚಿನ 14 ಸಹಕಾರ ಸಂಘಗಳ ಚುನಾವಣೆಯಲ್ಲಿ 168 ಜನ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಶಾಸಕರ ಮಾರ್ಗದರ್ಶನದಲ್ಲಿ, ಮುಖಂಡರ ಸಹಕಾರದಿಂದ 122 ಜನ ಸಹಕಾರ ಸಂಘಕ್ಕೆ ಆಯ್ಕೆಯಾಗಿದ್ದರೆ ಎಂದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕುಬೇರಗೌಡ್ರು, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮಂಜುನಾಥ, ಪುರಸಬೆ ಸದಸ್ಯ ಅಬ್ದುಲ್ ರೆಹಮಾನ್, ಬಾಗಳಿ, ಬಿ.ಬಿ. ಹೊಸೂರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು.ಪುರಸಬೆ ಅಧ್ಯಕ್ಷೆ ಫಾತಿಮಾ, ಪುರಸಬೆ ಸದಸ್ಯರಾದ ಟಿ.ವೆಂಕಟೇಶ್, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಉದ್ದಾರ ಗಣೇಶ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ರಾಮಣ್ಣ, ಪುರಸಭೆ ಸದಸ್ಯರು, ಸಹಕಾರ ಸಂಘದ ನೂತನ ಸದಸ್ಯರು, ಸೇರಿದಂತೆ ಕಾರ್ಯಕರ್ತರು ಇದ್ದರು.