ಸಾರಾಂಶ
ಉಪ್ಪಿನಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ೪ ಎಕ್ರೆ ಭೂಮಿ ಗುರುತಿಸಿದ್ದು, ಅದರ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಗೊಂಡಿದ್ದರೂ, ಪ್ರಸಕ್ತ ಇರುವ ಗ್ರಾಮ ಪಂಚಾಯಿತಿ ಒಡೆತನದ ಬಸ್ ನಿಲ್ದಾಣವನ್ನೇ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿದರೆ ಅಲ್ಲಿ ಸುವ್ಯವಸ್ಥಿತ ಬಸ್ ನಿಲ್ದಾಣವನ್ನು ನಿರ್ಮಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಆಸಕ್ತಿ ತಾಳಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ೪ ಎಕ್ರೆ ಭೂಮಿ ಗುರುತಿಸಿದ್ದು, ಅದರ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಗೊಂಡಿದ್ದರೂ, ಪ್ರಸಕ್ತ ಇರುವ ಗ್ರಾಮ ಪಂಚಾಯಿತಿ ಒಡೆತನದ ಬಸ್ ನಿಲ್ದಾಣವನ್ನೇ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿದರೆ ಅಲ್ಲಿ ಸುವ್ಯವಸ್ಥಿತ ಬಸ್ ನಿಲ್ದಾಣವನ್ನು ನಿರ್ಮಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಆಸಕ್ತಿ ತಾಳಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.ಅವರು ಗುರುವಾರ ಉಪ್ಪಿನಂಗಡಿಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಪ್ರಸಕ್ತ ಇರುವ ಗ್ರಾಮ ಪಂಚಾಯಿತಿ ಅಧೀನದ ಬಸ್ ನಿಲ್ದಾಣದ ಸುತ್ತಮತ್ತಲಿನ ಕಟ್ಟಡಗಳನ್ನು ತೆರವುಗೊಳಿಸಿ, ಸನಿಹದ ಕಂದಾಯ ಇಲಾಖಾ ಭೂಮಿಯನ್ನು ಒಳಗೊಂಡು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದರೆ, ಅವರು ಇಲ್ಲಿ ಯೋಜನಾಬದ್ಧವಾಗಿ ಬಸ್ ನಿಲ್ದಾಣವನ್ನು ನಿರ್ಮಿಸಲು ಸಿದ್ಧರಿದ್ದಾರೆ. ಈ ಸಂಬಂಧ ಪಂಚಾಯಿತಿ ಅಧೀನದ ಭೂಮಿ ಹಾಗೂ ಕಂದಾಯ ಇಲಾಖಾ ಅಧೀನದ ಭೂಮಿಯ ಅನುಪಾತದನ್ವಯ ಬಸ್ ನಿಲ್ದಾಣ ಕಟ್ಟಡದಲ್ಲಿ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ಕಟ್ಟಡಗಳನ್ನು ಸಾರಿಗೆ ನಿಗಮವು ಒದಗಿಸುವುದು. ಮಾತ್ರವಲ್ಲದೆ ಇಲ್ಲಿ ಬೇರೆ ಬಸ್ ನಿಲ್ದಾಣಗಳಿಲ್ಲದ ಕಾರಣ ಇದೇ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೂ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಬೇಕಾದರೂ ಮೊತ್ತ ಮೊದಲಾಗಿ ಪಂಚಾಯಿತಿ ಆಡಳಿತ ತನ್ನ ಅಧೀನದ ಬಸ್ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಲು ಮೊದಲ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ತಾಂತ್ರಿಕ ಅಭಿಯಂತರ ಕೆ.ಎಚ್. ಶ್ರೀನಿವಾಸ್, ಮುಖ್ಯ ಅಭಿಯಂತರ ಕೆ.ಎಚ್. ಹವಾಲ್ದಾರ್, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್, ಪಿಡಿಒ ಲಾರೆನ್ಸ್ ವಿಲ್ಫ್ರೆಡ್ ರೋಡ್ರಿಗಸ್, ಸ್ಥಳೀಯ ಪಂಚಾಯಿತಿ ಸದಸ್ಯರಾದ ಯು.ಟಿ. ಮಹಮ್ಮದ್ ತೌಸೀಫ್, ಧನಂಜಯ ನಟ್ಟಿಬೈಲ್, ರಶೀದ್ ಮಠ, ಪ್ರಮುಖರಾದ ಅಜೀಜ್ ಬಸ್ತಿಕಾರ್, ಆದಂ ಕೊಪ್ಪಳ, ನಜೀರ್ ಮಠ, ಸುಂದರ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಲಾಲಿ ಮಾರಾಟಗಾರನನ್ನು ಕಂಡು ಮರುಳಾದ ಶಾಸಕರು:ಬಸ್ ನಿಲ್ದಾಣ ಪರಿಸರದಲ್ಲಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಲಾಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಕಡವಿನ ಬಾಗಿಲು ನಿವಾಸಿ ರಫೀಕ್ ಎಂಬಾತನ ದುಡಿಮೆಯನ್ನು ಕಂಡು ಆತನೊಂದಿಗೆ ಮಾತಿಗಿಳಿಸಿದ ಶಾಸಕರು, ಈ ದುಡಿಮೆ ಜೀವನ ನಿರ್ವಹಣೆಗೆ ಸಾಕಾಗುವುದೇ? ಎಂದು ಪ್ರಶ್ನಿಸಿದರು. ಅದಕ್ಕೆ ರಫೀಕ್, ಕಳೆದ 40 ವರ್ಷಗಳಿಂದ ಇದೇ ಕಾಯಕವನ್ನು ನಡೆಸುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಕಾಲಕಾಲಕ್ಕೆ ಲಾಲಿ, ಹಣ್ಣುಗಳನ್ನು ತುಂಬಿ ಪ್ರಯಾಣಿಕರ ಬಳಿಗೆ ಹೋಗಿ ಮಾರಾಟ ಮಾಡುತ್ತಾ ತೃಪ್ತಿದಾಯಕ ಸಂಪಾದನೆ ಮಾಡುತ್ತಿದ್ದೇನೆ ಎಂದು ತಿಳಿಸಿದಾಗ, ಆತನ ಮೇಲೆ ಅಭಿಮಾನಗೊಂಡ ಶಾಸಕರು ಆತನಿಗೆ ೫೦೦ ರುಪಾಯಿ ನೀಡಿ ಅಭಿನಂದಿಸಿದರು.