ಸದ್ಗುಣ ಸಂಪಾದಿಸಿದರೆ ಬದುಕು ಉಜ್ವಲ: ರಂಭಾಪುರಿ ಶ್ರೀ

| Published : Aug 23 2024, 01:10 AM IST

ಸದ್ಗುಣ ಸಂಪಾದಿಸಿದರೆ ಬದುಕು ಉಜ್ವಲ: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಹೂವು ಒಂದೇ ದಿನ ಬಾಳಿದರೂ ನಾಲ್ಕು ಜನಕ್ಕೆ ಪರಿಮಳ ಕೊಟ್ಟು ಹೋಗುತ್ತದೆ. ಮನುಷ್ಯ ಸದ್ಗುಣ ಸಂಪಾದಿಸಿ ಬಾಳಿದರೆ ಬದುಕು ಉಜ್ವಲ ವಾಗಲಿದೆ. ಸಾಧನೆ ಗೆಲುವು ದುಡಿಯುವ ಕೈಗಳಿಂದ ಬರುತ್ತದೆ ಹೊರತು ಅಂಗೈನ ಅದೃಷ್ಟ ರೇಖೆಗಳಿಂದಲ್ಲ ಎಂಬುದನ್ನು ಯಾರೂ ಮರೆಯ ಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ತಪೋನುಷ್ಠಾನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹೂವು ಒಂದೇ ದಿನ ಬಾಳಿದರೂ ನಾಲ್ಕು ಜನಕ್ಕೆ ಪರಿಮಳ ಕೊಟ್ಟು ಹೋಗುತ್ತದೆ. ಮನುಷ್ಯ ಸದ್ಗುಣ ಸಂಪಾದಿಸಿ ಬಾಳಿದರೆ ಬದುಕು ಉಜ್ವಲ ವಾಗಲಿದೆ. ಸಾಧನೆ ಗೆಲುವು ದುಡಿಯುವ ಕೈಗಳಿಂದ ಬರುತ್ತದೆ ಹೊರತು ಅಂಗೈನ ಅದೃಷ್ಟ ರೇಖೆಗಳಿಂದಲ್ಲ ಎಂಬುದನ್ನು ಯಾರೂ ಮರೆಯ ಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಒಳ್ಳೆಯದನ್ನೇ ಯೋಚನೆ ಮಾಡಿದರೆ ಒಳ್ಳೆಯದೇ ಆಗುತ್ತದೆ. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ ಈ ಜಗತ್ತು ತುಂಬಾ ಸುಂದರವಾಗಿ ಕಾಣುತ್ತದೆ. ಸಮಯದ ಜೊತೆ ನಡೆಯದೇ ಸತ್ಯದ ಜೊತೆ ಹೆಜ್ಜೆ ಹಾಕುವುದು ಶ್ರೇಷ್ಠ. ಬೇರೆಯವರಿಗೆ ದಾರಿ ತೋರಿಸಲು ನೀನು ದೀಪ ಬೆಳಗಿದರೆ ಅದು ನಿನ್ನ ದಾರಿಗೆ ಬೆಳಕು ಚೆಲ್ಲುತ್ತದೆ. ಗೆದ್ದವರು ಸಂತೋಷದಿಂದ ಸೋತವರು ಯೋಚಿಸುತ್ತಾ ಇರುತ್ತಾರೆ. ಆದರೆ ಸೋಲು ಗೆಲುವು ಶಾಶ್ವತ ಅಲ್ಲವೆಂದು ತಿಳಿದು ಬಾಳಿದವರು ಮಹಾತ್ಮರಾಗಿ ಜಗಕ್ಕೆ ಬೆಳಕು ತೋರುತ್ತಾರೆ. ಜಗದ್ಗುರು ರೇಣುಕಾಚಾರ್ಯರು ಅತ್ಯಮೂಲ್ಯ ಮಾನವ ಜೀವನದ ಸಾಫಲ್ಯಕ್ಕಾಗಿ ತೋರಿದ ದಾರಿ ಹಾಗೂ ಕೊಟ್ಟ ಸಂದೇಶ ಸರ್ವರಿಗೂ ಸುಖಶಾಂತಿ ಬದುಕಿಗೆ ಆಶಾಕಿರಣ. ಅರಿತು ಬಾಳಿದರೆ ಬಾಳು ಬಂಗಾರ ಮರೆತು ಬಾಳಿದರೆ ಬಾಳು ಬಂಧನಕಾರಿ ಎಂದರು.ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ್ ಮಾತನಾಡಿ, ಆಕಾಶದಿಂದ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿಂದ ಗಿಡ ಮರಗಳು ಬದುಕುತ್ತವೆ. ಹಾಗೆಯೇ ನಮಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬ ದೃಢ ನಂಬಿಕೆಯಿಂದ ನಡೆದರೆ ಬದುಕು ಸಾರ್ಥಕಗೊಳ್ಳುತ್ತದೆ. ಜಗದ್ಗುರು ರೇಣುಕಾಚಾರ್ಯರ ಜಗತ್ಕಲ್ಯಾಣ ಮಹತ್ಕಾರ್ಯಗಳು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿವೆ ಎಂದರು. ನೇತೃತ್ವ ವಹಿಸಿದ್ದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಬಿಲ್ಲು ಬಾಗಿದರೆ ಮಾತ್ರ ಬಾಣ ಮುಂದೆ ಹೋಗುತ್ತದೆ. ಅದೇ ರೀತಿ ದೇಹ ಬಾಗಿದಾಗ ಮಾತ್ರ ಜೀವನ ಮುಂದೆ ಸಾಗುತ್ತದೆ. ಜಗದ್ಗುರು ರೇಣುಕಾಚಾರ್ಯರ ಮಾನವೀಯತೆಯ ಆದರ್ಶ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು. ಸಮಾರಂಭದಲ್ಲಿ ಆಲಮೇಲ ಚಂದ್ರಶೇಖರ ಶ್ರೀಗಳು, ತಡವಲಗಾ ರಾಚೋಟೇಶ್ವರ ಶ್ರೀಗಳು, ಯಂಕಂಚಿ ರುದ್ರಮುನಿ ಶ್ರೀಗಳು, ಗುಂಡನಾಳ ಗುರುಲಿಂಗ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ದಾವಣಗೆರೆ ಡಾ.ಎಸ್.ಕೆ. ಕಾಳಪ್ಪನವರ, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ, ರುದ್ರಯ್ಯ ದೊಡ್ಡಬ್ಬಿಗೇರಿ, ರಾಣೆಬೆನ್ನೂರಿನ ಸಿದ್ಧಲಿಂಗಯ್ಯ ಹಿರೇಮಠ, ಬಮ್ಮನಹಳ್ಳಿ ವೀರಣ್ಣ, ಐಟಿಐ ಉಮೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಸೇವಾ ಕೈಂಕರ್ಯ ನಡೆಸಿದ ಗಣ್ಯರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು. ರೇಣುಕಾಚಾರ್ಯ ಗುರುಕುಲದ ಸಾಧಕರು ವೇದಘೋಷ ಮಾಡಿ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಭಕ್ತಿಗೀತೆ ಸೇವೆ ಮಾಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.೨೨ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ರಂಭಾಪುರಿ ಜಗದ್ಗುರುಗಳು ಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು.