ದೌರ್ಜನ್ಯ ತಡೆಗೆ ಸಹಾಯವಾಣಿ ಬಳಸಿ

| Published : Aug 23 2024, 01:10 AM IST

ಸಾರಾಂಶ

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟುಕು ಗೊಳಿಸ ಬಾರದು. ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿಯಲ್ಲಿದೆ. ಅಪ್ರಾಪ್ತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗುಸಲಾಗುವುದು

ಕನ್ನಡ ವಾರ್ತೆ ಮಾಲೂರು

ಹೆಣ್ಣು ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ಹಾಗೂ ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಯಾರಾದರೂ ಕಿರುಕುಳ ತೊಂದರೆ ದೌರ್ಜನ್ಯವೆಸಗಲು ಮುಂದಾದರೆ ಮಹಿಳಾ ಸಾಂತ್ವನ ರಕ್ಷಣಾ ಘಟಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ತಕ್ಷಣ ನಿಮ್ಮ ನೆರವಿಗೆ ಬರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಬಿ.ನಿಖಿಲ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಾಲೂರು ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರಕ್ಷಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಬಳಿ ಸಮಸ್ಯೆ ಹೇಳಿಕೊಳ್ಳಿ

ವಿದ್ಯಾರ್ಥಿನಿಯರು ವ್ಯಾಸಂಗದ ದಿನಗಳಲ್ಲಿ ಶಿಕ್ಷಕರ ಸಲಹೆ ಮಾರ್ಗದರ್ಶನ ಪಡೆದು ನಿಮ್ಮ ಕನಸುಗಳು ನನಸಾಗಲು ಶ್ರಮಿಸಿ. ನಿಮ್ಮ ನೆಚ್ಚಿನ ಶಿಕ್ಷಕರ ಬಳಿ ನಿಮಗೆ ಆಗುವ ಅಹಿತಕರ ಘಟನೆ ನಿಮಗೆ ಆಗುತ್ತಿರುವ ಅನ್ಯಾಯ ನೋವಿನ ಬಗ್ಗೆ ಹೇಳಿಕೊಂಡಾಗ ಅವರು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ, ಶಿಕ್ಷಕರಿಗೆ ಆತ್ಮ ಸಾಕ್ಷಿ ಸೂಕ್ಷ್ಮತೆ ಇರುತ್ತದೆ ಎಂದರು.

ಶಿಕ್ಷಣ ಮೊಟಕುಗೊಳಿಸಬೇಡಿ

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟುಕು ಗೊಳಿಸ ಬಾರದು. ಸಮಾಜದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವ ಸಲುವಾಗಿ ಪೋಕ್ಸೋ ಕಾಯ್ದೆ ಜಾರಿಯಲ್ಲಿದೆ. ಅಪ್ರಾಪ್ತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗುಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಂಜುಳ, ಉಪ ಪ್ರಾಂಶುಪಾಲ ವಿಜಯ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್‌ ವಸಂತ್, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ಶಿಕ್ಷಕರು ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.